ಜರ್ಮನಿ ಮೂಲಕ ಪ್ರಖ್ಯಾತ ನಾಟಕಕಾರ, ಕವಿ ಬ್ರೆಕ್ಟ್ ನ ಕವಿತೆಗಳ ಕನ್ನಡಾನುವಾದ. ಚಿಂತಕ, ಲೇಖಕರಾದ ಪ್ರೊ. ಕೆ. ಫಣಿರಾಜ್ ಅವರು ಸಮಾಜವಾದದ ಕುರಿತಾದ ಬ್ರೆಕ್ಟ್ ಕಾವ್ಯವನ್ನು ಕನ್ನಡೀಕರಿಸಿದ್ದಾರೆ. ಬ್ರೆಕ್ಟ್ ಸ್ವಲ್ಪ ಮಟ್ಟಿಗೆ ಅವನದ್ದೇ ಗೆಲಿಲಿಯೋ' ನಾಟಕದ ನಾಯಕನನ್ನು ಹೋಲುವವನು. ಗೆಲಿಲಿಯೋ, ತಾನು ಕಂಡುಕೊಂಡ ವೈಜ್ಞಾನಿಕ ಸತ್ಯಗಳಿಗೆ, ಕ್ಯಾಥೋಲಿಕ್ ಚರ್ಚ್ ಮತ್ತು ಅದರ ಗುತ್ತೇದಾರ ಪೋಪ್ ಮಹಾಶಯನನ್ನು ಎದುರು ಹಾಕಿಕೊಂಡು ಬದ್ಧನಾಗಿರುತ್ತಾನೆ; ಹಾಗೆಂದ ಮಾತ್ರಕ್ಕೆ, ಒಳ್ಳೆಯ ಬಾತುಕೋಳಿಯ ಖಾದ್ಯವೆಂದರೆ, ಎಲ್ಲರ ಹಾಗೆ ಅವನ ಬಾಯಲ್ಲೂ ನೀರೂರುತ್ತದೆ. ಅವನು ಸುಖವನ್ನು ಬಯಸುವವನು; ಆದರೆ ಸತ್ಯವನ್ನು ಬಲಿಕೊಟ್ಟು ಅಲ್ಲ. ಅದೇ ವೇಳೆಗೆ, ಸತ್ಯಕ್ಕಾಗಿ ಅವನು ಬದುಕುವವನೇ ಹೊರತು, ತನ್ನ ಜೀವನವನ್ನು ಬಲಿದಾನ' ಕೊಡುವವನೂ ಅಲ್ಲ. ಗೆಲಿಲಿಯೋನ ಆ ಗುಣಗಳೆಲ್ಲ ಬ್ರೆಕ್ಟ್ ನಲ್ಲೂ ಕಾಣಿಸುತ್ತವೆ. ಅವನದ್ದು, ತನ್ನ ಕಾಲದ ಕಠೋರತೆಯನ್ನು ಮರೆತ ಅಥವಾ ಅಲಕ್ಷಿಸಿದ ಲೋಲುಪ ರಸಿಕತೆಯಲ್ಲ. ಫ್ಯಾಸಿಸಂಗೆ ಪ್ರತಿರೋಧ, ನಾಟಕಗಳ ಒಲವು, ಸಾಹಿತ್ಯದ ಅಭಿರುಚಿ, ಜೀವನದಲ್ಲಿ ಸುಂದರವಾದ ಎಲ್ಲದರ ಬಗ್ಗೆಯೂ ಆಶೆ-ಇವೆಲ್ಲವೂ ಒಟ್ಟಾಗಿ ಬೈಕ್ಟ್ ಜನಪರ, ಜೀವಪರ' (ಕನ್ನಡದ ಈ ಕ್ಲೀಷೆಯನ್ನು ಕ್ಷಮಿಸೋಣವಾಗಲಿ) ಧೋರಣೆಯಾಗಿದೆ.
ಇವನ್ನು ಒಟ್ಟಾಗಿ ಪರಿಗಣಿಸದೆ ಬೈಕ್ಟ್ ರಾಜಕೀಯ, ಅವನ ಕಲೆ ಎರಡೂ ನಮ್ಮ ಗ್ರಹಿಕೆಗೆ ನಿಲುಕುವುದಿಲ್ಲ... ಅಸಹನೀಯ ಊರುಗಳಲ್ಲಿಯೂ ಪಿಟೀಲು, ಹಾರ್ಮೋನಿಯಂ, ತಬಲ ವಾದಕರಿರುತ್ತಾರೆ; ಅವುಗಳನ್ನು ರಿಪೇರಿ ಮಾಡುವವರೂ ಇರುತ್ತಾರೆ. ಅವರು ಸಹ ಅನ್ನ ಸಂಪಾದಿಸಬೇಕು. ದೊಣ್ಣೆನಾಯಕರು ಬೀದಿ ಬೀದಿಗಳಲ್ಲಿ ಠಳಾಯಿಸುವ ಊರುಗಳಲ್ಲಿಯೂ ಹೂವಾಡಿಗರು ತಮ್ಮ ವೃತ್ತಿ ನಡೆಸಿ ದಿನನಿತ್ಯದ ಅನ್ನ ಸಂಪಾದಿಸಬೇಕು; ಅಂದರೆ ಮಲ್ಲಿಗೆ ಕೊಳ್ಳುವವರೂ ಊರಿನಲ್ಲಿ ಇರಬೇಕು. ಊರಿಗೆ ಬೆಂಕಿ ಬಿದ್ದಾಗ ಮಲ್ಲಿಗೆ ಹೂವು ಯಾರಿಗೆ ಬೇಕು ಎಂದು ಬ್ರೆಕ್ಟ್ ಖಂಡಿತ ಕೇಳುವವನಲ್ಲ. ಅವನಿಗೆ ಮಲ್ಲಿಗೆ ಹೂವೂ ಕಾಣುತ್ತದೆ, ಅದನ್ನು ಮಾರಲು ಕುಂತವನೂ ಕಾಣುತ್ತಾನೆ; ಊರುಕೇರಿಗಳ “ಬಜರಂಗಿ”ಗಳನ್ನೂ ಅವನು ಗಮನಿಸುತ್ತಾನೆ... ಅಡಾರ್ನೊ “ಆಪ್ವಿಟ್ ನಂತರ ಯಾತರ ಕಾವ್ಯ?” ಎಂದು ಪ್ರಶ್ನಿಸಿದ. ಅಡಾರ್ನೊ ಕೇಳಿದ ಪ್ರಶ್ನೆಯನ್ನು ನಾವು ಕಲೆಯ ಬಗ್ಗೆ ಕೇಳದಿದ್ದರೆ, ನಮ್ಮ ಕಲಾಭಿಜ್ಞತೆ ಕೇವಲ ಲೋಲುಪತೆ ಆಗುತ್ತದೆ; ಆ ಪ್ರಶ್ನೆಯಲ್ಲೇ ಅದರ ಉತ್ತರವೂ ಇದೆ ಎಂಬ ವಾಸ್ತವವನ್ನು ಗುರುತಿಸುವುದೇ ನಿಜವಾದ ಕಾವ್ಯದ ರಸಿಕತೆ, ಬ್ರೆಕ್ಟ್ ಕವಿತೆಗಳು ಮತ್ತೆ ಮತ್ತೆ ನಮಗೆ ಕಾಣಿಸುವ ಸತ್ಯ ಇದು ಎನ್ನುತ್ತಾರೆ ಲೇಖಕ ಜಿ. ರಾಜಶೇಖರ. ಬ್ರೆಕ್ಟ್ ನ ಸಮಾಜವಾದದ ಕುರಿತಾದ ಬಹುಮುಖ್ಯ ಪದ್ಯಗಳನ್ನು ಚಿಂತಕರಾದ ಕೆ. ಫಣಿರಾಜ್ ಅಷ್ಟೇ ಸೂಕ್ಷ್ಮಗ್ರಹಿಕೆಯೊಂದಿಗೆ ಕನ್ನಡೀಕರಿಸಿದ್ದಾರೆ.
©2024 Book Brahma Private Limited.