19 ದೇಶಗಳ, 31 ಕವಿಗಳ, 80 ಕವಿತೆಗಳ ಕನ್ನಡಾನುವಾದ ಸಂಕಲನ ‘ಕನ್ನಡಕ್ಕೆ ಬಂದ ಕವಿತೆ’. ಓ.ಎಲ್. ನಾಗಭೂಷಣಸ್ವಾಮಿ ಈ ಕೃತಿಯನ್ನು ರಚಿಸಿದ್ದಾರೆ. ಈ ಅನುವಾದಗಳು ಮೈದಾಳಿರುವ ಕನ್ನಡಕ್ಕೆ ಒಂದು ವೈಶಿಷ್ಟ್ಯವಿದೆ. ಈ ಕವಿತೆಗಳು ಶರಧಿಯಂತೆ ಭೋರ್ಗರೆಯುವುದಿಲ್ಲ. ಜಲಪಾತದಂತೆ ಧುಮ್ಮಿಕ್ಕುವುದಿಲ್ಲ. ಸಮನೆಲದ ಮೇಲೆ ಸರಾಗವಾಗಿ ಇಂಪಾದ ಕಲರವದೊಡನೆ ಹರಿಯುವ ನದಿಯ ಸಿಂಗಾರಕ್ಕೆ ಹತ್ತಿರವಾದ ಗದ್ಯಗಂಧಿಯಾದ ಕಾವ್ಯ ಭಾಷೆಯೊಂದನ್ನು ಓ.ಎಲ್.ಎನ್ ಅವರು ಮೂಲಕೃತಿಗಳ ಮುಖಾಮುಖಿಯೊಂದಿಗೆ ರೂಪಿಸಿಕೊಂಡಿದ್ದಾರೆ.
ಭಾಷೆಯನ್ನು ವಿರೂಪಗೊಳಿಸುವುದೊಂದೇ ಸೃಜನಶೀಲತೆಯ ಏಕಮಾತ್ರ ಮಾರ್ಗವೆಂಬ ಅತಿರೇಕದ ಆಡಂಬರಗಳಿಗೆ ಓ.ಎಲ್. ನಾಗಭಾಷಣ್ ಅವರ ಅನುವಾದದ ಭಾಷೆ ಅಪವಾದವಾಗಿದೆ ಎನ್ನುತ್ತಾರೆ ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್. ಸರಳತೆಯೊಳಗೆ ಸಂಕೀರ್ಣತೆಯನ್ನು ಸಾಕಾರಗೊಳಿಸುವ ಒಂದು ಸ್ತುತ್ಯ ಪ್ರಯತ್ನವೇ ಈ ಕೃತಿ. ಸಾಹಿತ್ಯಕ ಭಾಷೆಯ ಬಿಗುವಿನ ಸೋಗನ್ನು ಹಾಕದೆ ಸಹಜ ಕನ್ನಡ ಪದ ಮತ್ತು ನುಡಿಗಟ್ಟುಗಳೊಳಗೇ ಆಧುನಿಕ ಕಾವ್ಯದ ಅಗ್ಗಳ ಕೃತಿಗಳನ್ನು ಪಡಿಮೂಡಿಸಬಹುದೆಂದು ಈ ಅನುವಾದಗಳು ಸಾಬೀತು ಮಾಡುತ್ತವೆ.
©2024 Book Brahma Private Limited.