ಈ ನೂರು ವರ್ಷಗಳಲ್ಲಿ ರವೀಂದ್ರನಾಥ ಟ್ಯಾಗೋರ್‌ರ ಗೀತಾಂಜಲಿ ಕೃತಿ ಸುಮಾರು 25 ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಗೋವಿಂದ ಪೈ ಅವರು ಗೀತಾಂಜಲಿ ಅನುವಾದಿಸಿದವರಲ್ಲಿ ಪ್ರಥಮರು (1925). ತದನಂತರದಲ್ಲಿ ಹೇರಂಜೆ ಕೃಷ್ಣಭಟ್, ಮಾಸ್ತಿ ವೆಂಕಟೇಶ ಅಯ್ಯಂಗಾರ, ಎಮ್. ಬಿ. ಬೂದಿಹಾಳುಮಠ, ನರೆಗಲ್ಲ ಪ್ರಹ್ಲಾದರಾಯರು, ಜಿ. ರಾಮನಾಥ ಭಟ್, ಸ.ಪ.ಗಾಂವ್ಕರ್, ಅಡಿಗರು, ಎಂ.ಆರ್.ಸಿ. ನಾಗರಾಜನ್ ಹಾಗೂ ಇತ್ತೀಚೆಗೆ ಡಾ. ನವೀನ ಹಳೆಮನೆ (2007) ಸೇರಿದಂತೆ ಹಲವರು ಗೀತಾಂಜಲಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ಈ ಎಲ್ಲ ಕೃತಿಗಳಲ್ಲಿ ಕವಿತೆಗಳ ಸಂಖ್ಯೆ ಮಾತ್ರ ಹೆಚ್ಚೂ ಕಡಿಮೆ 103 ಇದೆ. 51 ಕವಿತೆಗಳುಳ್ಳ ಮೂಲ ಗೀತಾಂಜಲಿಯನ್ನೊಳಗೊಂಡು ತಮ್ಮ 103 ಕವಿತೆಗಳನ್ನು ಮೊದಲು ಸ್ವತಃ ರವೀಂದ್ರರು ಬಂಗಾಲಿಯಿಂದ ಇಂಗ್ಲಿಷ್ಗೆ ಅನುವಾದಿಸಿದರು.
ಗೀತಾಂಜಲಿ ಸೇರಿದಂತೆ ರವೀಂದ್ರರ ಕಾವ್ಯ ಕೃತಿಗಳಾದ ನೈವೇದ್ಯ, ಗೀತಮಾಲ್ಯ, ಖೇಯಾ ಮತ್ತು ಶಿಶುಗಳಲ್ಲಿ 207 ಕವಿತೆಗಳಿವೆ. ಜಿ. ರಾಮನಾಥ್ ಅವರು ರವೀಂದ್ರರ ಈ 207 ಕವಿತೆಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಪ್ರಥಮ ಪ್ರಯೋಗ ಮಾಡಿದರು. ತದನಂತರ ಈ ಕೃತಿಯಲ್ಲಿ ಇದೇ ಎರಡನೇ ಬಾರಿಗೆ ರವೀಂದ್ರರ ಎಲ್ಲ 207 ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಐರಿಷ್ ಕವಿ ಡಬ್ಲೂ. ಬಿ. ಯೇಟ್ಸ್ ಅವರು ಮೂಲ ಗೀತಾಂಜಲಿಗೆ ಬರೆದ ಹಾಗೂ ಜಿ. ರಾಮನಾಥ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ ಮುನ್ನುಡಿಯನ್ನು ನೀಡಲಾಗಿದೆ, ಗೀತಾಂಜಲಿಗೆ ನೊಬೆಲ್ ಪ್ರಶಸ್ತಿ ಸ್ವೀಕಾರದ ಸಂದರ್ಭದಲ್ಲಿ ರವೀಂದ್ರನಾಥ್ ಟ್ಯಾಗೋರ್ ಅವರು ಮಾಡಿದ ಭಾಷಣದ ಅನುವಾದವನ್ನು ನೀಡಲಾಗಿದೆ, ಕನ್ನಡದ ಸಂವೇದನಶೀಲ ಬರಹಗಾರ ರಾಗಂ ಅವರು ಸದರಿ ಕೃತಿಗೆ ಬರೆದ ಪರಿಚಯಾತ್ಮಕ ಲೇಖನವಿದೆ, ಮಹರ್ಷಿ ಅರವಿಂದ ಅವರು ಗೀತಾಂಜಲಿಯ ಕುರಿತು ಬರೆದ ಕಾವ್ಯನಿಕಷವನ್ನೂ ನೀಡಲಾಗಿದೆ.
©2024 Book Brahma Private Limited.