ಕೇರಳದ ಮಕ್ಕಳ ಸಾಹಿತಿ ಡಾ.ರೆಜಿ ಡಿ. ನಾಯರ್ ಅವರ ಕೃತಿಯನ್ನು ‘ಕನ್ನಂಬಾಡಿಯ ಚಿಣ್ಣರು’ ಶಿರ್ಷಿಕೆಯಡಿ ಲೇಖಕಿ ಮಾಯಾ ಬಿ. ನಾಯರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶೋಚನೀಯ ಸ್ಥಿತಿಯಲ್ಲಿರುವ 48 ಸಾವಿರ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಮುಂದೆ ಸಮಸ್ಯೆಗಳ ಸರಮಾಲೆ ಇದೆ ಎನ್ನುವುದನ್ನು ಇಲ್ಲಿ ಹೇಳುತ್ತಾರೆ. ಸಾಮಾಜಿಕ, ಮಾನಸಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳನ್ನು ಮೆಟ್ಟಿನಿಂತು ಸಮಸ್ಯೆಗಳನ್ನು ಸೋಪಾನ ಮಾಡಿಕೊಂಡು ಸಾಧನೆಗೈದ ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಮೇಷ್ಟು ಮತ್ತು ಮಕ್ಕಳ ನಡುವಿನ ಸಂವಾದದ ಮುಖಾಂತರ ಚಿಂತೆಗಳನ್ನು ಚಿಂತನೆಯನ್ನಾಗಿ ಪರಿವರ್ತಿಸಿ, ಪರಿಹಾರ ಸೂಚಿಸುವ ಈ ಸಾಹಿತ್ಯ ಮಕ್ಕಳಿಗೂ ಶಿಕ್ಷಕರಿಗೂ ಹಿತವಾಗಿದೆ. ಉದಾಹರಣೆಗೆ ಅಜ್ಜಿಗೆ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದ ವಿದ್ಯಾರ್ಥಿ ರಾಹುಲ್ ಪಾತ್ರದ ಮುಖಾಂತರ ಮಕ್ಕಳಲ್ಲಿ ಹಿರಿಯರ ಬಗ್ಗೆ ಪ್ರೀತಿ, ಗೌರವ, ಕನಿಕರ ತೋರಿಸುವ ಸದ್ಗುಣವನ್ನು ಮಕ್ಕಳ ಮನದಲ್ಲಿ ತುಂಬಲಾಗಿದೆ. ಮಕ್ಕಳಲ್ಲಿ ಕುಟುಂಬದ ಅನ್ಯೋನ್ಯತೆ ಕುಟುಂಬದ ಸದಸ್ಯರಲ್ಲಿ ಸುಮಧುರ ಸಂಬಂಧ, ಸಹಕಾರ, ಸಹಾನುಭೂತಿ, ಸಂತೋಷಗಳ ಸಮ್ಮಿಶ್ರಣವನ್ನು ಹದವಾಗಿ ಬಿಂಬಿಸಿದ್ದಾರೆ. ಚಿಕ್ಕಮ್ಮ ಅರಿಶಿಣದ ಎಲೆಯಲ್ಲಿ ಮಾಡಿದ ಕಡುಬು ಕೊಡುವುದು ಇತ್ಯಾದಿ ಮಕ್ಕಳನ್ನು ಮುದಗೊಳಿಸುವ ತಿಂಡಿಗಳ ಮಹತ್ವ ತಿಳಿಸುತ್ತದೆ. ಮನಸ್ಸಿಗೆ ಯಾವುದೇ ಹೊಸ ಆಲೋಚನೆ ಬಂದರೆ ಒಂದು ನೋಟ್ ಬುಕ್ ಇಲ್ಲವೇ ಡೈರಿಯಲ್ಲಿ ಬರೆದಿಡಬೇಕು ಎಂದು ಹಿತವಾಗಿ ಮನದಟ್ಟು ಮಾಡುವ ಲೈಬ್ರರಿಯಲ್ಲಿನ ರಂಗಸ್ವಾಮಿ ಮಾಸ್ತರು, ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸುವುದನ್ನು ಸೂಚಿಸುತ್ತದೆ. ಜೊತೆಗೆ ಓದದೇ ಧೂಳು ಹಿಡಿದ ಪುಸ್ತಕಗಳನ್ನು ಓದುಗರಿಗೆ ತಲುಪಿಸ ಬೇಕೆಂಬ ಕ್ರಮ ಓದಿನ ಮಹತ್ವ ತಿಳಿಸುತ್ತದೆ. ಧಾರಾಕಾರವಾಗಿ ಸುರಿಯುವ ಮಳೆಯಲ್ಲೂ ಅಮ್ಮ ಕೆಲಸಕ್ಕೆ ಹೋಗುವುದರಿಂದ ಸ್ತ್ರೀಶಕ್ತಿ ಗುಂಪು ಹೇಗೆ ಅಮ್ಮನಿಗೆ ಆಶ್ರಯ ಎಂದು ಸಮಾಜಿಕ ಸಹಕಾರದ ಮಹತ್ವ ತಿಳಿಸಿ, ಮಗನು 'ಅಮ್ಮ ನಾನು ಓದಿ ದೊಡ್ಡವನಾದ ಮೇಲೆ ನೀನು ಕೆಲಸಕ್ಕೆ ಹೋಗ ಬೇಕಾಗಿಲ್ಲ' ಎಂದು ಮಮಕಾರದಿಂದ ಹೇಳುವುದು, ಮಕ್ಕಳ ಮನದಲ್ಲಿ ಮಮತೆ ಮೊಳಕೆ ಒಡೆಯುವಂತೆ ಮಾಡುತ್ತದೆ.
©2024 Book Brahma Private Limited.