ಪಾರಸಿಯ ಪ್ರಮುಖ ಕವಿಗಳಲ್ಲಿ ಜಲಾಲುದ್ದೀನ್ ರೂಮಿ ಒಬ್ಬ. ಜಾಮಿ, ಉಮರ್ ಕಯ್ಯಾಮ್, ಅತ್ತಾರ, ಸಾದಿಯಂತಹ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲುವ ರೂಮಿಯ ಕವಿತೆಗಳು ಸೂಫಿ ಹಾಗೂ ಪ್ರೇಮ ತಾತ್ವಿಕತೆಯ ಆತ್ಯಂತಿಕ ರೂಪದಲ್ಲಿವೆ. ರೂಮಿಯ ಕವಿತೆಗಳನ್ನು ಎಚ್.ಎಸ್. ಅನುಪಮಾ ಅವರು ಕನ್ನಡೀಕರಿಸಿ ಕೊಟ್ಟಿದ್ದಾರೆ.
ತಿರುಗುವ ಎಲ್ಲದಕ್ಕೂ ಪಥಿಯ ವೇಗ ಹೆಚ್ಚಳವಾಗುತ್ತ ಹೋದಂತೆ ಕೇಂದ್ರದಲ್ಲೊಂದು ನಿಶ್ಚಲ ಬಂದು ಸೃಷ್ಟಿಯಾಗುತ್ತದೆ. ಹೊರಕವಚ ವೇಗಗೊಂಡಷ್ಟೂ ಒಳ ಮಧ್ಯಜಂದು ನಿಶ್ಚಲವಾಗುತ್ತದೆ. ಸಂಪೂರ್ಣ ಚಲನೆಯಲ್ಲಡಗಿದ ಈ ನಿಶ್ಚಲ ಸ್ಥಿತಿಯ ಅರಿವೇ 'ಸ್ವ' ದ ಅಳಿವು.
ರೂಮಿ ಒಮ್ಮೆ ಒಂದೇಸಮ ಮುವ್ವತ್ತಾರು ತಾಸು ತಿರುಗಿದ, ತಿರುಗುವವನನ್ನು ನೋಡಲು ಊರಿಗೂರೇ ನೆರೆಯಿತು. ನೋಡಲು ನಿಂತವರು ಮನೆಗೆ ಹೋದರು, ಬಂದರು, ಉಂಡರು, ಮಲಗಿದರು, ಆದರೆ ರೂಮಿ ತಿರುಗುತ್ತಲೇ ಇದ್ದ ತಾಸುಗಟ್ಟಲೆ. ಆತ್ಮದ ಕೇಂದ್ರ ’ಸ್ವ'ವನ್ನು ತಲುಪಿದಂತೆನಿಸಿ ಕೆಳಗೆ ಇದ್ದ, ಜನರೆಲ್ಲ ನೋಡುತ್ತಲೇ ಇದ್ದಾಗ ನಗುತ್ತ ಮೇಲೆದ್ದು, 'ನೀವು ದೇವರನ್ನರಸುತ್ತ ತೀರ್ಥಯಾತ್ರೆ ಹೋಗುತ್ತೀರಿ, ನಾನು ನನ್ನ ದೇವನನ್ನು ಇಲ್ಲಿಯೇ, ಇದೀಗ ಕಂಡುಕೊಂಡೆ' ಎಂದ.
ಈ ಅನುಭವ ರೂಮಿಗೊಂದು ಅರಿವು ಮೂಡಿಸಿತು. ಹುಡುಕಾಟ ಬಾಹ್ಯವಲ್ಲ, ಅಂತರಂಗದ ಆಳಕ್ಕಿಳಿದು ಹುಡುಕಬೇಕು; ಹಗುರವಾಗಬೇಕಾದರೆ ಲಯಗೊಳ್ಳಬೇಕು ಎಂಬ ಅರಿವು, ವಿರಹವನ್ನು ಅಧ್ಯಾತ್ಮಿಕ ತೇಲಿಸುವ ಅರಿವು. ಹುಡುಕಲಿಕ್ಕೆ ಅವನಲ್ಲಿ ಹೋಗಿದ್ದಾನೆ? ನನ್ನೊಳಗೆ ನಾನೇ ಆ ಅವಳಿದ್ದಾನೆ ಎಂಬ ಸಾಕ್ಷಾತ್ಕಾರವಾಯಿತು. ನಾನೇ ಅವನೆಂಬ ಭಾವ ಹುಟ್ಟಿಸಿತು.
'ರೂಮಿ ಕವಿತೆಗಳಲ್ಲಿ ಬರಸೆಳೆಯುವ ಸೌಂದರ್ಯವಿದೆ. ಈ ಕವನ ಸಂಕಲನದ ಮೂಲ ನೆಲೆ ಹಾಗೂ ನಿಲುವನ್ನು ಹುಡುಕುತ್ತ ಹೊರಟರೆ ನಮಗೆ ಮುಖ್ಯವಾಗಿ ಕಾಣಬಹುದಾದದ್ದು, ಪ್ರೇಮ ಹಾಗೂ ಅದರ ಜೊತೆಗೆ ಅಂಟಿಕೊಂಡೆ ಬರುವ ಬಂಡಾಯ ಪ್ರವೃತ್ತಿ. ರೂಮಿಯ ಕವಿತೆಯೊಳಗಿನ ಉಗಿಯಲ್ಲಿ ಮೈ ಕಾಯಿಸಿಕೊಂಡ ಮೇಲೆ, ಮತ್ತೆ ಮತ್ತೆ ಕಾಯಿಸಿಕೊಂಡು ಅದರ ಸ್ವಾದವನ್ನು ಅನುಭವಿಸುತ್ತಲೇ ಇರಬೇಕು ಎನ್ನಿಸುತ್ತದೆ ಎಂದು ಪಿ.ಕೆ. ನವಲಗುಂದ ಅವರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.