'ಕಾಮ ಕಸ್ತೂರಿ ಬನ' ಪ್ರಕಾಶ್ ಮಂಟೇದ ಅವರ ಕವನ ಸಂಕಲನವಾಗಿದೆ. ಕವನಗಳಲ್ಲಿಯೂ ಕ್ರಾಂತಿ ಮತ್ತು ಪ್ರೇಮ, ರಮ್ಯ ಕನಸು ಮತ್ತು ಕಟುವಾಸ್ತವಗಳು ಏಕಕಾಲದಲ್ಲಿ ಕಾಣಬಲ್ಲವು. ಎರಡೂ ಲೋಕಗಳ ಕುದಿಯಲ್ಲಿ ಹದಗೊಂಡು-ಜೀವ ಕಂಪನ, ಜೀವ ದಯೆ, ಜೀವಂಕರ್ಷ, ಜೀವ ಸಂಪಿಗೆ, ಜೀವ ಬಂಧನ, ಮುಂತಾದ ಪದಗಳು ಇಡೀ ಸಂಕಲನದುದ್ದಕ್ಕೂ ರೂಪುಗೊಂಡಿವೆ. ಸಮಾನತೆ, ಸೋದರತ್ವ, ಭ್ರಾತೃತ್ವವನ್ನು ಮೈಗೂಡಿಸಿಕೊಂಡು ಬದುಕಿದ ಹಲವಾರು ವ್ಯಕ್ತಿಗಳ ಚಿತ್ರಣ ಕಾಣುವುದು; ನಿಕೃಷ್ಟಕ್ಕೆ ಒಳಗಾದವರ ಬದುಕಿನ ಗತಿಯನ್ನು ಬದಲಿಸಬೇಕೆನ್ನುವ ಛಲ ಹೊಮ್ಮುವುದು ಈ ಕಾರಣಕ್ಕಾಗಿಯೇ. ಮಂಟೇದರ ಕವನಗಳಲ್ಲಿ ಅನ್ಯಾಯಗಳ ಬಗ್ಗೆ ತಕರಾರನ್ನೇ ತೆಗೆಯದ ಸಮಯ ಸಾಧಕರ ಬಗ್ಗೆ, ಸುಳ್ಳುಗಳನ್ನು ಗಟ್ಟಿ ದನಿಯಲ್ಲಿ ಹೇಳುತ್ತಾ, ಸತ್ಯವನ್ನಾಗಿಸಲು ಯತ್ನಿಸುತ್ತಿರುವ ಮಾಧ್ಯಮಗಳ ಬಗ್ಗೆ ಆಕ್ರೋಶವಿದೆ. ಮನುಷ್ಯ ಸಂಬಂಧಗಳನ್ನು ಸರಕಾಗಿಸಿರುವ ಸ್ಥಿತಿಯ ಬಗ್ಗೆ ಅಸಹನೀಯ ವೇದನೆಯಿದೆ. ಭಾವಕ್ಕೆ ತಕ್ಕಂತೆ ಮಂಟೇದರ ಕಾವ್ಯ ಭಾಷೆಯೂ ಬದಲಾಗುತ್ತದೆ. ಆದರೆ ಮಂಟೇದ ಅವರ ಒಟ್ಟು ಕಾವ್ಯದ ಧೋರಣೆ, ಉದ್ದೇಶ ಮಾತ್ರ ಒಂದೇ. ದ್ವೇಷ ರಹಿತ ವಾತಾವರಣಕ್ಕಾಗಿ ಕವಿಯ ತೀವ್ರವಾದ ಹಂಬಲ, ಕರುಣೆ, ಪ್ರೀತಿ, ಹದವರಿತ ಸಂಬಂಧಗಳಿಗಾಗಿ ತುಡಿತ, ಭೇದ ಭಾವಗಳಿಲ್ಲದ ಸುಂದರ ಸಮಾಜದ ಕನಸು ಎಂದು ಎಂ.ಆರ್. ಕಮಲ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.