’ಷಾಜಹಾನರ ನಖಾಬ್’ ತೆಲುಗು ಕವಯಿತ್ರಿ ಷಾಜಹಾನರ ನಖಾಬ್‌ನ ಹಸ್ತಪ್ರತಿಯ ಕನ್ನಡ ರೂಪ.ಒಂದು ಭಾಷಾ ಸಂಸ್ಕೃತಿಗೆ 'ಅಪರಿಚಿತ'ವಾದ ಕೃತಿಯನ್ನು 'ಸುಪರಿಚಿತ'ವನ್ನಾಗಿ ಮಾಡುವುದೆ ಅನುವಾದ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಸ. ರಘುನಾಥ ಅವರ ಶ್ರಮ ಯಶಸ್ಸು ಕಂಡಿದೆ.
ಸಮಕಾಲೀನ ಸಂದರ್ಭದಲ್ಲಿ ಸ್ತ್ರೀವಾದಿ ವಿಚಾರಧಾರೆಯ ಹಿನ್ನೆಲೆಯಿಂದ ತಮ್ಮ ಕೃತಿಯಲ್ಲಿ ಷಾಜಹಾನ್ ಧಾರ್ಮಿಕ ಪ್ರತಿವಾದಿಯಾಗಿಯೆ ತಮ್ಮ ಗಟ್ಟಿ ದನಿಯನ್ನು ಎತ್ತಿದ್ದಾರೆ. ವಿಶ್ವದ ಪ್ರಮುಖ ಧರ್ಮಗಳಲ್ಲಿ ಇಸ್ಲಾಂ ಧರ್ಮ ಮಾತ್ರ ಹೆಣ್ಣಿನ ಮೇಲೆ ಹೆಚ್ಚು ನಿರ್ಬಂಧಗಳನ್ನು ಹೇರದೆ ಅವಳಿಗೆ ಸ್ವಾತಂತ್ರ್ಯವನ್ನು ನೀಡಿ ಉದಾರವಾಗಿ ನಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇಂಥ ಅಭಿಪ್ರಾಯಗಳ ವಿರುದ್ಧ ಸೆಡ್ಡುಹೊಡೆದು ನಿಂತಿರುವ ಷಾಜಹಾನ್ ಹೇಳುತ್ತಾಳೆ: ಹುಟ್ಟಿದಂದಿನಿಂದ ಚಾಂದನಿಯ ರುಚಿಯರಿಯದೆ, ಮಳೆಯ ರುಚಿ ತಿಳಿಯದೆ, ವಸಂತದ ರುಚಿಯನ್ನೂ ನೋಡದೆ ಬೆಳೆದು, ನಿರ್ಬಂಧಗಳ ಸರಹದ್ದುಗಳಲ್ಲಿ ಗುಲಾಮಳಾಗಿ ಬೆಳೆದ ಹೆಣ್ಣು, ಮುಸ್ಲಿಂ ಮಹಿಳೆ ಹಲವು ನಿರ್ಬಂಧಗಳ ನಡುವೆ ಬಂಧಿಯಾಗಿದ್ದಾಳೆ. ಆಕೆ ಸ್ವಂತಿಕೆಯೆ ಇಲ್ಲದ ಗುಲಾಮಳು. ಮಾನವ ಪ್ರಕೃತಿಯ ಮಗುವಾಗಿದ್ದರೂ ಆಕೆ ನಿಸರ್ಗದೊಂದಿಗೆ ಸಂಪರ್ಕ ಪಡೆದಿಲ್ಲ. ಹಾಗಾಗಿ ಅನ್ಯಳಾಗಿ ಅನಾಥಳಾಗಿ ಬೆಳೆದಿದ್ದಾಳೆ. ಪ್ರಕೃತಿಯಲ್ಲಿನ ಬದಲಾವಣೆಗಳು ಮಾನವನಲ್ಲಿ ಉಂಟುಮಾಡುವ ಅಚ್ಚರಿ, ವಿಸ್ಮಯ, ಬೆರಗುಗಳ ಸಂಸರ್ಗದಿಂದ ದೂರವಾಗಿ ನಲಿವು ಕಾಣದ ಸೆರೆಯಲ್ಲಿ ಉಳಿದಿದ್ದಾಳೆ.
©2024 Book Brahma Private Limited.