‘ವಿದ್ಯಾಪತಿಯ ಗೀತೆಗಳು’ ದೇಬೆನ್ ಭಟ್ಟಾಚಾರ್ಯ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದ ಕೃತಿಯ ಕನ್ನಡಾನುವಾದ ಲೇಖಕ ಓ.ಎಲ್. ನಾಗಭೂಷಣ ಸ್ವಾಮಿ ಅವರು ಕನ್ನಡೀಕರಿಸಿದ್ದಾರೆ. ವಿದ್ಯಾಪತಿ ಮೈಥಿಲೀ ಭಾಷೆಯ 14ನೇ ಶತಮಾನದ ಮಹಾಕವಿ. ಅವರ ನೂರು ಪ್ರೇಮಕವಿತೆಗಳ ಸಂಕಲನದ ಕನ್ನಡಾನುವಾದವಿದು. ನಿಸರ್ಗದ ಅಂಶಗಳಾದ ಮಿಂಚು, ಮೋಡ, ಚಂದ್ರ, ಇರುಳು, ತಾವರೆ, ದುಂಬಿ, ಮಹಾನ್ ಪ್ರೇಮಿಗಳಾದ ರಾಧಾ ಕೃಷ್ಣರೊಡನೆ ಅವರ ಪ್ರೀತಿ, ವಿರಹ, ಆವೇಗ, ಉದ್ವೇಗ, ದುಃಖ, ಸಂತೋಷಗಳೊಡನೆ ಬೆಸುಗೆ ಮಾಡಿರುವುದೇ ವಿದ್ಯಾಪತಿ ಕವಿತೆಗಳ ವೈಶಿಷ್ಟ್ಯವಾಗಿದೆ. ಜಯದೇವನ ಗೀತಗೋವಿಂದದ ಪ್ರಭಾವವನ್ನು ಕಾಣಬಹುದಾಗಿದೆ. ಮಹಾಕವಿ ವಿದ್ಯಾಪತಿ ಹುಟ್ಟಿದ್ದು ಇಂದಿನ ಬಿಹಾರದ ಮಧುಬನಿಯಲ್ಲಿರುವ ಚಶಾಪಿ ಎಂಬ ಹಳ್ಳಿಯಲ್ಲಿ. ಆತ ಮಿಥಿಲಾ ಪ್ರಾಂತ್ಯದಲ್ಲಿ ತನ್ನ ಬಹುಭಾಗವನ್ನು ಕಳೆದನೆಂದು, ಮಿಥಿಲಾದ ರಾಜ ಕೀರ್ತಿಸಿಂಹನ ಆಶ್ರಯದಲ್ಲಿದ್ದು, ‘ಕೀರ್ತಿಲತಾ’ ಎಂಬ ಕಾವ್ಯ ರಚಿಸಿದನೆಂಜು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಸಾಹಿತ್ಯದ ಮಾರ್ಗ ಶೈಲಿಗೆ ಭಿನ್ನವಾಗಿ ಛಂದೋಬದ್ಧ ಕಾವ್ಯಕ್ಕೆ ಹೊರತಾಗಿರುವ ವಿದ್ಯಾಪತಿಯ ಈ ಪ್ರೇಮಗೀತೆಗಳು ಅತ್ಯಂತ ವಿಶಿಷ್ಟವಾಗಿವೆ. ಮೂಲ ಕವಿತೆಗಳಿಗೆ ದಕ್ಕೆಯಾಗದಂತೆ ಅಷ್ಟೇ ಸರಳ ಭಾಷೆಯಲ್ಲಿ ಓ.ಎಲ್. ನಾಗಭೂಷಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.