ಸ್ವತಃ ಕವಿಯಾದ ಡಾ. ಕೆ. ಕೃಷ್ಣಮೂರ್ತಿ ಅವರು ಸಂಸ್ಕೃತ ಕವಿ ಕ್ಷೇಮೇಂದ್ರನ ಕೃತಿ ‘ಕಂಠಾಭರಣ’ವನ್ನು ಅದ್ಭುತವಾಗೇ ಕನ್ನಡಿಕರಿಸಿದ್ದಾರೆ. ಕಾವ್ಯ ರಚನೆಯ ರಹಸ್ಯವನ್ನು ಹಂತಹಂತವಾಗಿ ತೆರೆದಿಡುವ ರೀತಿಯೇ ಇಲ್ಲಿ ಅದ್ಭುತ ಕಲೆಯಾಗಿ ರೂಪು ಪಡೆದಿದೆ. ಕವಿ ಕಂಠಾಭರಣ ಕೃತಿಯಲ್ಲಿ ಐದು ಸಂಧಿಗಳಿವೆ. ಕವಿತ್ವ ಪ್ರಾಪ್ತಿ, ಭಾಷಾ ಪ್ರಭುತ್ವ, ಚಮತ್ಕಾರ ಕಥನ, ಗುಣದೋಷ ಹಾಗೂ ಪರಿಚಯ ಪ್ರಾಪ್ತಿ. ಇವುಗಳ ಮೂಲಕವೇ ಕಾವ್ಯ ಪಂಚಾಯತನದ ಪರಿಚಯ ಮಾಡಿಕೊಡುತ್ತಾನೆ. ಕಾವ್ಯವನ್ನು ಅಭ್ಯಾಸ ಮಾಡುವ ಪರಿ, ಆಲಿಸುವ ಪರಿ, ಗೋಷ್ಠಿಗಳನ್ನು ಭಾಗವಹಿಸಿ ಕಾವ್ಯವನ್ನು ಸಮರ್ಥಿಸಿಕೊಳ್ಳುವ, ಸೂಕ್ತಿಯನ್ನು ಸಂಗ್ರಹಿಸಿ, ವಿವೇಚಿಸುವ ಬಗ್ಗೆ ಅತ್ಯಂತ ಸ್ಪಷ್ಟವಾಗಿ ವಿವರಿಸಿದ್ದಾನೆ. ಬಾಣ, ಕಾಳಿದಾಸ, ರಾಜಶೇಖರ ಹೀಗೆ ವಿವಿಧ ಕವಿಗಳ ಹೆಸರುಗಳನ್ನು ಉಲ್ಲೇಖಿಸಿ, ಗಜಶಾಸ್ತ್ರ, ರಸ ಔಚಿತ್ಯ, ತರ್ಕ ಪರಿಚಯ ಹೀಗೆ ವಿವಿಧ ಶಾಸ್ತ್ರ ಪರಿಚಯಗಳ ಅಗಾಧ ಪಾಂಡಿತ್ಯವನ್ನು ತೋರುವ ಈ ಕ್ಷೇಮೇಂದ್ರ, ಕಾವ್ಯ ಸಿದ್ಧಿಯ ಬಗೆಗೂ ತಿಳಿಸುತ್ತಾನೆ. ಇಂತಹ ಅಪೂರ್ವ ಜ್ಞಾನಗಳ ಸಂಗ್ರಹವಾಗಿ ಈ ಕೃತಿ ತನ್ನ ಹಿರಿಮೆ-ಗರಿಮೆಯನ್ನು ಕಾಯ್ದುಕೊಂಡಿದೆ.
©2025 Book Brahma Private Limited.