ಉರ್ದುವಿನ ಪ್ರಸಿದ್ಧ ಕವಿ ಕೈಫಿ ಅಜ್ಮಿ. ಚಿತ್ರರಂಗಕ್ಕೆ ಉರ್ದು ಸಾಹಿತ್ಯದ ಹೊಳೆಯೇ ಹರಿಯುವಂತೆ ಮಾಡಿದವರು. ಗಜಲ್‌ಗಳ ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರು ನಂತರ ಎಡಪಂಥೀಯ ಚಳವಳಿಯಿಂದ ಪ್ರಭಾವಿತರಾಗಿ ತಮ್ಮ ಆಲೋಚನೆಗಳನ್ನು ರೂಪಿಸಿಕೊಂಡರು. ಆರಕ್ಕೂ ಹೆಚ್ಚು ಕವಿತಾ ಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ. ಮೊದಲ ಸಂಕಲನ ಜಾನ್‌ಕಾರ್ ಪ್ರಕಟವಾಗಿದ್ದು 1943ರಲ್ಲಿ. ಗೇಯತೆ, ಸೌಂದರ್ಯದ ಜೊತೆಗೆ ನೋವಿಗೆ ಮಿಡಿಯುವ ಅವರ ಕಾವ್ಯವನ್ನು ’ಬೆತ್ತಲೆ ರಸ್ತೆಯ ಕನಸಿನ ದೀಪ’ ಕನ್ನಡಕ್ಕೆ ಅನುವಾದಿಸಿದ್ದು ಕವಯತ್ರಿ ವಿಭಾ ಅವರು.
ವಿಭಾ ಅವರು ಈಗ ಬದುಕಿಲ್ಲ. ಆದರೆ ಅವರ ಅನುವಾದದ ಕುಸರಿ ಕೆಲಸವನ್ನು ನೋಡಲಿಕ್ಕಾದರೂ ಪುಸ್ತಕವನ್ನು ಓದಬೇಕು.
ನಾನು ಬಯಸುವ ಆ ಜಗತ್ತು ಸಿಕ್ಕುತ್ತಿಲ್ಲ
ಹೊಸ ಭೂಮಿ, ಹೊಸ ಆಗಸ ಸಿಗುತ್ತಿಲ್ಲ
ಹೊಸ ಭೂಮಿ, ಹೊಸ ಆಗಸ ದೊರೆತರೂ
ಹೊಸ ‘ಮನುಷ್ಯ’ರ ಗುರುತು ಸಿಗುತ್ತಿಲ್ಲ
ನನ್ನ ಕೊಲೆಗೈದ ಖಡ್ಗ ಸಿಕ್ಕರೂ ಕೂಡ
ಅಲ್ಲಿ ಕೊಲೆಗಾರನ ಕೈಯ ಗುರುತು ಸಿಗುತ್ತಿಲ್ಲ
ಅದು ನನ್ನೂರು, ಅವು ನನ್ನೂರಿನ ಒಲೆಗಳು
ಅವುಗಳಲ್ಲಿ ಬೆಂಕಿಯಷ್ಟೇ ಅಲ್ಲ, ಹೊಗೆ ಕೂಡ ಸಿಗುತ್ತಿಲ್ಲ
ದೇವರು ಸಿಗುತ್ತಿಲ್ಲವೆಂಬುದೇನು ಮಹಾ ದುರಂತವಲ್ಲ
ನನಗೆ ನನ್ನದೇ ಹೆಜ್ಜೆಗಳ ಗುರುತು ಸಿಗುತ್ತಿಲ್ಲ
ಅನಂತ ಕಾಲದಿಂದ ಜನಜಂಗುಳಿಯಲ್ಲಿ ನಿಂತಿದ್ದೇನೆ
ಎಲ್ಲೂ ನಿನ್ನ ಚಹರೆಯ ಗುರುತು ಸಿಗುತ್ತಿಲ್ಲ
(ಲಡಾಯಿ ಪ್ರಕಾಶನ ಪ್ರಕಟಿಸಿರುವ ವಿಭಾ ಅನುವಾದಿಸಿದ ಕೈಫಿ ಅಜ್ಮಿ ಅವರ ಕವಿತೆಗಳ ಸಂಕಲನ 'ಬೆತ್ತಲೆ ರಸ್ತೆಯ ಕನಸಿನ ದೀಪ' ದಿಂದ ಆಯ್ದ ಕವಿತೆ)
©2024 Book Brahma Private Limited.