ಕನ್ನಡದ ಸಮಕಾಲೀನ ಕವಿಗಳಲ್ಲಿ ಗದುಗಿನ ಎ. ಎಸ್. ಮಕಾನದಾರ ಅವರು ಪ್ರಮುಖರು. ಇವರ ‘ಅಕ್ಕಡಿ ಸಾಲು’ ಎಂಬ ಕೃತಿ ಮರಾಠಿ, ತೆಲುಗು, ಇಂಗ್ಲಿಷ್‌ಗೆ ತರ್ಜುಮೆಗೊಳ್ಳುತ್ತಿದೆ. ಅಕ್ಕಡಿ ಸಾಲು ಕೃತಿಯಲ್ಲಿಯ ಆಯ್ದ ಕವಿತೆಗಳನ್ನು ಹಿಂದಿಭಾಷೆಗೆ ‘ಖಾಮೋಶಿ’ ಎಂಬ ಶೀರ್ಷಿಕೆಯಡಿ ಅನುವಾದಿಸಿ ಕನ್ನಡದ ನೆಲ, ಜಲ, ಸಂಸ್ಕೃತಿಯ ಮೂಲಸೊಗಡನ್ನು ಉಳಿಸಿಕೊಂಡು ಕಾವ್ಯಾಸಕ್ತರಿಗೆ ತಲುಪಿಸುವ ಯತ್ನ ಮಾಡಲಾಗಿದೆ. ಮಕಾನದಾರ ಅವರದು ಬಹುಆಯಾಮದ ಕಾವ್ಯ. ಇಲ್ಲಿ ಧರ್ಮಾಂಧತೆಯ ಮೇಲೆ ಪ್ರಹಾರವಿದೆ, ಅನ್ಯಾಯದ ವಿರುದ್ಧದ ದನಿ ಇದೆ, ಸಮಕಾಲೀನ ಸಮಸ್ಯೆಗಳಿಗೆ ತೀವ್ರವಾಗಿ ತುಡಿಯುವ ಮನಸಿದೆ, ಸಮಾಜದಲ್ಲಿ ಯಾವ್ಯಾವುದೋ ರೂಪತೊಟ್ಟು ಎದ್ದು ನಿಲ್ಲುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವಿದೆ. ಇಲ್ಲಿಯ ಕವಿತೆಗಳು ಕನಕ, ಕಬೀರ್, ಶರೀಫ್, ಪುಟ್ಟರಾಜ, ಗಾಂಧೀ, ಮುರ್ತುಜ್, ಸಿದ್ಧಾರೂಢ, ಖಾದರಲಿಂಗ, ಸಾಮ್ರಾಟ ಅಶೋಕ, ನಾಗಲಿಂಗ, ಹುಚ್ಚೀರಪ್ಪ, ಚನ್ನಬಸಪ್ಪ, ಭೀಮವ್ವ, ಸಂಗಮನಾಥ, ಗೌತಮ, ಗೊಮ್ಮಟ ಹೀಗೆ ಒಬ್ಬೊಬ್ಬ ವಿಭೂತಿಯ ಮುಖಾಂತರ ಒಂದೊಂದು ಕಾಲಘಟ್ಟಗಳನ್ನು ಸ್ಪರ್ಶಿಸುತ್ತವೆ.
ಈ ಕವಿತೆಗಳನ್ನು ತುಂಬ ತನ್ಮಯತೆಯಿಂದ ಅತ್ಯಂತ ನಿಖರತೆ ಹಾಗೂ ಯಾವ ಭಾವವೂ ಸೋರಿಹೋಗದಂತೆ ಬಲು ಎಚ್ಚರಿಕೆಯಿಂದ ಅನುವಾದಿಸಲಾಗಿದೆ. ದಿಲ್ಲಿಯ ಚಲನಚಿತ್ರ ನಿರ್ದೇಶಕ ಹಾಗೂ ಕವಿ ಡಾ. ಮುಖೇಶಕುಮಾರ ಅವರ ಮುನ್ನುಡಿ, ಆಸ್ಸಾಂ ರಾಜ್ಯದ ನಾಯಗಾಂವ ವಿದ್ಯಾಲಯದ ಹಿಂದಿ ವಿಭಾಗ ಪ್ರಮುಖರು ಹಾಗೂ ಕವಯಿತ್ರಿ ಡಾ. ಮಾನಿಕಾ ಶೈಕಿಯಾ ಅವರ ಹಿನ್ನುಡಿ ಲಭಿಸಿದೆ ಹಾಗೂ ಪ್ರಖ್ಯಾತ ಸೂಫೀ ವಿದ್ವಾಂಸರು, ಅರಬೀ, ಫಾರಸಿ ಮತ್ತು ಹಿಂದಿ ಭಾಷಾತಜ್ಞರೂ ಆಗಿ ಅಹಮದನಗರ ವಿ.ವಿ.ಯ ಡಾ. ಮುಹಮ್ಮದ್ ಆಝಮ್ ಅವರ ಒಳನೋಟವೂ ಈ ಕೃತಿಯಲ್ಲಿದೆ. ಹೀಗಾಗಿ, ಕನ್ನಡದಿಂದ ಅನ್ಯಭಾಷೆಗೆ ಹೋದ ಮಹತ್ವದ ಕೃತಿಗಳಲ್ಲಿ ಇದೂ ಕೂಡ ಒಂದು.
©2024 Book Brahma Private Limited.