ವಿ. ಕೃಷ್ಣಮೂರ್ತಿ ರಾವ್ ಅವರು ಕಳೆದ ನಾಲ್ಕು ವರ್ಷಗಳಿಂದ ಯೇಟ್ಸ್‌ನನ್ನು ಧ್ಯಾನಿಸಿ, ಅವರ ಎಪ್ಪತ್ತು ಕವಿತೆಗಳನ್ನು ಸೊಗಸಾಗಿ ಅನುವಾದಿಸಿದ್ದಾರೆ. ಯೇಟ್ಸ್ ಕಾವ್ಯಸಂಕಲನದ ಚಾರಿತ್ರಿಕ ನೆಲೆಗಳನ್ನು ತಿಳಿದಿರುವಂತೆ ಪ್ರವೇಶಿಕೆಗಳನ್ನು ಹೆಕ್ಕಿ, ಈ ಕೃತಿ ರಚಿಸಿದ್ದಾರೆ. ವಿ. ಕೃಷ್ಣಮೂರ್ತಿರಾವ್ ಅವರ ಓದು, ಅಧ್ಯಯನ, ಅಭ್ಯಾಸ, ವಿಮರ್ಶಾ ವಿವೇಕ, ಅನುವಾದದ ರಮಣೀಯತೆ ಇಲ್ಲಿ ಕಾಣಸಿಗುತ್ತದೆ.
‘ಅನ್ಯರ ಜತೆಗಿನ ಜಗಳದಿಂದ ನಾವು ಮಾಡುವುದು, ವಾಕ್ಚತುರತೆ, ಆದರೆ ನಮ್ಮೊಡನೆ ನಮ್ಮ ಜಗಳದಿಂದ ರಚಿಸುವುದು, ಕವಿತೆ’ ಎಂದು ಹೇಳಿದ ಪ್ರಸಿದ್ಧ ಕವಿ ಡಬ್ಲು.ಬಿ. ಯೇಟ್ಸ್‌ನ ಎಪ್ಪತ್ತು ಕವಿತೆಗಳ ಕನ್ನಡ ಅನುದಾದ ಪುಸ್ತಕ ಪ್ರಕಟಗೊಂಡಿದೆ. ಪ್ರೊ.ವಿ. ಕೃಷ್ಣಮೂರ್ತಿ ರಾವ್ ಅವರು ಕವಿತೆಗಳ ಅನುವಾದ ಮಾಡಿದ್ದಾರೆ. ಈ ಕೃತಿಯಲ್ಲಿ ಯೇಟ್ಸ್‌ನ 13 ಕವನ ಸಂಕಲನಗಳಿಂದ ಆಯ್ದ ಕವಿತೆಗಳ ಅನುವಾದವಿದೆ. ಪ್ರತಿ ಕವನ ಸಂಕಲನದಿಂದ ಮೂರು ಅಥವಾ ಏಳು ಕವಿತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅನುವಾದದ ಜತೆಗೆ, ಕವನ ಸಂಕಲನಗಳ ಕುರಿತ ಟಿಪ್ಪಣಿಗಳನ್ನು ನೀಡಿದ್ದಾರೆ. ಕವನದ ಚೌಕಟ್ಟು, ಕವನದ ಕುರಿತು ಯೇಟ್ಸ್ ಮಾತನಾಡಿದ ಕೆಲವು ಭಾಗಗಳನ್ನು ಈ ಟಿಪ್ಪಣಿಯಲ್ಲಿ ಕೊಡಲಾಗಿದೆ. ಜತೆಗೆ, ಕವಿತೆಗಳೊಂದಿಗಿನ ಲೇಖಕನ ಅನುಸಂಧಾನದ ಅನುಭವಗಳನ್ನು ಇಲ್ಲಿ ಹಿಡಿದಿಡುವ ಪ್ರಯತ್ನವನ್ನು ಟಿಪ್ಪಣಿಗಳಲ್ಲಿ ಕೃತಿಕಾರ ಮಾಡಿದ್ದಾರೆ. ಕವಿತೆಗಳಲ್ಲಿ ಕನ್ನಡದ ಓದುಗರಿಗೆ ಬರುವ ಸಾಂಸ್ಕೃತಿಕ ಭಿನ್ನತೆ ಇರುವ ಅಂಶಗಳ ಕುರಿತೂ ಲೇಖಕ ಅಡಿಟಿಪ್ಪಣಿಗಳನ್ನು ನೀಡಿದ್ದಾರೆ.
ಕೃಪೆ : ಪ್ರಜಾವಾಣಿ (2020 ಫೆಬ್ರುವರಿ 16)
©2024 Book Brahma Private Limited.