ತೆಲುಗು ಕವಯತ್ರಿ ಮಹೆಜಬೀನ್ ಅವರ 'ಆಕು ರಾಲು ಕಾಲಂ’ ಕವನ ಸಂಕಲನದ ಭಾವಾನುವಾದ. ತೆಲುಗು ಕವಿತೆಗಳನ್ನು ಚಿದಾನಂದ ಸಾಲಿ ಅವರು ಸೊಗಸಾಗಿ ಕನ್ನಡೀಕರಿಸಿದ್ದಾರೆ. ಈ ಸಂಕಲನದ ಕವಿತೆಗಳ ಕುರಿತು ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ’ನೀಲಿ ಕಣ್ಣುಗಳ ಹುಡುಗಿ ಜಬೀನ್ ಬರೆದ ಕವಿತೆಗಳನ್ನು ಓದುತ್ತಿದ್ದರೆ ದುಃಖಗೊಂಡ ಪಕ್ಕದ ಮನೆಯ ಹುಡುಗಿಯೊಬ್ಬಳ ಹೃದಯದೊಳಕ್ಕೆ ಇಣುಕಿದಂತಾಗುತ್ತದೆ. ಯಾರನ್ನೋ ಕಳೆದುಕೊಂಡು, ಯಾರಿಗೂ ಹೇಳಿಕೊಳ್ಳಲಾಗದಂತದ ಯಾತನೆಯನ್ನು ಅನುಭವಿಸುತ್ತಿರುವ ಹುಡುಗಿಯೊಂದಿಗೆ ನಾವಷ್ಟೇ ಮಾತಾಡಿದಂತಾಗುತ್ತದೆ. ಆಕೆಯ ಕವಿತಾ ಸಂಪುಟ 'ಆಕು ರಾಲು ಕಾಲಂ’ನ ಭಾವಾನುವಾದವನ್ನು ನನ್ನ ಪ್ರೀತಿಯ ಹುಡುಗ ಚಿದಾನಂದ ಸಾಲಿ ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಾಹಿತಿ ಶಾಂತರಸ ಅವರು ’ಎಲೆಯುದುರೂ ಕಾಲ' ಓದಿದೆ, ಮತ್ತೆ ಮತ್ತೆ ಓದಿದೆ. ತುಂಬ ಖುಷಿಪಟ್ಟೆ, ಸಮರ್ಥ ಅನುವಾದ, ಅನುವಾದ ಎಂಬುದನ್ನು ತೆಗೆದರೆ ಅದು ನಿಮ್ಮದೇ ಕಾವ್ಯ ಅನ್ನಿಸದಿರದು; ಅಷ್ಟು ಸೊಗಸಾಗಿದೆ ಅನುವಾದೆ. ಕನ್ನಡಕ್ಕೆ ಒಂದು ಹೊಸ ಕಾವ್ಯ ಕೊಟ್ಟಿರಿ. ನಮ್ಮಲ್ಲಿ ಇನ್ನೂ ಇಂಥ ಸಂವೇದನೆ ಬರಬೇಕು’ ಎಂದು ಶ್ಲಾಘಿಸಿದ್ದಾರೆ.
ಯುವಕವಿ ಡಾ. ಆನಂದ ಋಗ್ವೇದಿ ಅವರು ’ಅನುವಾದದಲ್ಲಿ ಸಾಲಿ, ಕನ್ನಡದ ನುಡಿಗಟ್ಟು, ಮಟ್ಟುಗಳಲ್ಲಿ ಕವಿತೆಗಳನ್ನಷ್ಟೇ ಅಲ್ಲದೆ, ಅವುಗಳ ತೆಲುಗುತನವನ್ನೂ ಮುಕ್ಕಾಗದ ರೀತಿಯಲ್ಲಿ ತಂದಿರಿಸಿದ್ದಾನೆ. ಹಾಗಾಗಿ ಈ ಸಂಕಲನದ ಮೊದಲ ಓದು ಸರಾಗವಾದ, ಆಪ್ತವಾದ, ಹೃದಯಸ್ಪರ್ಶಿಯಾದ ಅನುಭವ ನೀಡುತ್ತದೆ, ಸ್ತ್ರೀತನದ ಗಟ್ಟಿದನಿಯ ಈ ಕವಿತೆಗಳನ್ನು ಪುರುಷನೊಬ್ಬ ಅನುವಾದ ಮಾಡುವಾಗ ಈ ಸ್ತ್ರೀತನ ಮುಕ್ಕಾಗದೆ ಉಳಿದ ಸೂಕ್ಷ್ಮತೆ ಇದೆಯಲ್ಲ, ಅದು ಅನುವಾದದ ಸಾರ್ಥಕತೆ’ ಎಂಬ ಮಾತುಗಳು ಅನುವಾದದ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
©2024 Book Brahma Private Limited.