ಈಶಾನ್ಯ ಭಾರತ ಕವಿತೆಗಳು-ಲೇಖಕ ಎಂ. ವೆಂಕಟಸ್ವಾಮಿ ಅವರು ಈಶಾನ್ಯ ಭಾರತದ ಬುಡಕಟ್ಟು ಭಾಷೆಯ ಪ್ರಮುಖ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ಕೃತಿಗೆ ಬೆನ್ನುಡಿ ಬರೆದು ‘ವೆಂಕಟಸ್ವಾಮಿಯವರು ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಂಡಷ್ಟೇ ತೀವ್ರವಾಗಿ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಶಾನ್ಯ ಭಾರತದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿಯ ಬುಡಕಟ್ಟು ಜನರ ಜೀವನ ವಿಧಾನದ ಬಗ್ಗೆ ಅತೀವ ಪ್ರೀತಿ ಕಾಳಜಿ ವಹಿಸಿ ಅಧ್ಯಯನ ಮಾಡಿದ್ದಾರೆ. ಆ ಬಗ್ಗೆ ಗದ್ಯ ಕೃತಿಯೊಂದನ್ನು ಪ್ರಕಟಿಸಿದ್ದಾರೆ. ಅವರು ಮೂಲತಃ ಕವಿ ಪ್ರಜ್ಞೆಯ ಅಧಿಕಾರಿ. ಈಶಾನ್ಯ ಭಾರತದಲ್ಲಿರುವ ಎಲ್ಲ ಬುಡಕಟ್ಟು ಭಾಷೆಗಳ ಪ್ರಮುಖ ಕವಿಗಳ ಕೆಲವು ಮುಖ್ಯ ಕವಿತೆಗಳನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕವನಗಳನ್ನು ಓದುತ್ತಿದ್ದರೆ ಆ ನೆಲದ ಬದುಕಿನಲ್ಲಿ ಈಗ ಎದ್ದಿರುವ ಎಲ್ಲ ಬಗೆಯ ತವಕ ತಲ್ಲಣಗಳನ್ನು ಕೇಳುತ್ತೇವೆ. ಆ ಸವಾಲು ಸಮಸ್ಯೆಗಳ ಒಳಸುಳಿಗಳಿಂದ ಬಿಡಿಸಿಕೊಂಡು ಹೊಸ ಬಗೆಯ ಬದುಕಿಗೆ ಪರೀಕ್ಷೆಯ ನೋಟ ಬೀರಿರುವ ಹೊಸ ದನಿಗಳನ್ನು ಕೇಳುತ್ತೇವೆ. ಆ ನೆಲದಲ್ಲಿ ಬದುಕುವಾಗ ಡಾ.ಎಂ.ವೆಂಕಟಸ್ವಾಮಿಯವರ ಎಚ್ಚರ ಪ್ರಜ್ಞೆಯ ಚಿಂತನಶೀಲ ಗುಣ ನೆಲದ ದನಿಗೆ ಮಿಡಿದಿದೆ. ಆ ಜಗತ್ತಿನ ಪರಿಚಯವನ್ನು ಕನ್ನಡ ಜಗತ್ತಿಗೆ ಮಾಡಿಸುವ ಹಂಬಲದಲ್ಲಿ ಅಲ್ಲಿನ ಸಂವೇದನೆಯನ್ನು ಅನುವಾದಿಸುವ ಪ್ರೀತಿ ತೋರಿದೆ. ಹೀಗೆ ಅವರು ಕೇವಲ ಸಂಬಳದ ಸೇವೆ ನಿರ್ವಹಿಸುವ ಅಧಿಕಾರಿಯಾಗದೆ ನೆಲದ ದನಿಗೆ ಕಿವಿ ಕಣ್ಣು ಹೃದಯ ತೆರೆದ ಕವಿಯಾಗಿ ಸಾಂಸ್ಕೃತಿಕ ರಾಯಭಾರಿಯಂತೆ ಹೊಣೆಯರಿತು ನಡೆದವರಾಗಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ದೇಶದ ಈಶಾನ್ಯ ಭಾಗವನ್ನು ದಕ್ಷಿಣ-ಪೂರ್ವ ಏಷ್ಯಾದ ಸಾಂಸ್ಕೃತಿಕ ಪಡಸಾಲೆ ಎಂದು ಕರೆಯುತ್ತಾರೆ. ಈ ವಲಯದಲ್ಲಿ 8 ರಾಜ್ಯಗಳಿದ್ದು ಅವುಗಳನ್ನು ಸಪ್ತಸಹೋದರಿಯರು ಒಬ್ಬ ಪುಟ್ಟ ತಮ್ಮ (ಸಿಕ್ಕಿಂ) ಎಂದು ಕರೆಯುತ್ತಾರೆ. ಈ 8 ರಾಜ್ಯಗಳಲ್ಲಿ ಸುಮಾರು 220 ಬುಡಕಟ್ಟು ಮತ್ತು ಉಪಬುಡಕಟ್ಟು ಜನಾಂಗಗಳಿದ್ದು ಎಲ್ಲರೂ ತಮ್ಮದೇ ಬುಡಕಟ್ಟು ಭಾಷೆಗಳನ್ನು ಮಾತನಾಡುತ್ತಾರೆ. ಆದರೆ ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗುವುದಿಲ್ಲ. ಈ ವಲಯದಲ್ಲಿ ಮೂಲವಾಗಿ ಆಸ್ಟ್ರೋಲಾಯ್ಡ್ ಜನರಿದ್ದು ಅನಂತರ ಕಾಕಸರು ಮತ್ತು ಮಂಗೋಲಾಯ್ಡ್ ಜನಾಂಗಗಳು ಸಂಕರಗೊಂಡವು ಎನ್ನಲಾಗಿದೆ. ಪ್ರಪಂಚದ ಬಹಳಷ್ಟು ಪುರಾತನ ಭಾಷೆಗಳು ಅಳಿವಿನ ಅಂಚಿನಲ್ಲಿದ್ದು, ಈಶಾನ್ಯ ಭಾಗದ ಎಲ್ಲಾ ಭಾಷೆಗಳು ಬಹು ಬೇಗನೇ ಭೂಮಿಯಿಂದ ಮಾಯವಾಗಲಿವೆ. ಅಸ್ಸಾಮಿ ಭಾಷೆಗೆ ಬೆಂಗಾಲಿ-ದೇವನಾಗರಿ ಲಿಪಿ ಇದ್ದರೆ, ಮಣಿಪುರಿ ಭಾಷೆಗೆ ಬೆಂಗಾಲಿ ಲಿಪಿಯನ್ನು ಅಳವಡಿಸಲಾಗಿದೆ. ಉಳಿದ ಕೆಲವು ನಾಗಾಮೀಸ್ (ಬ್ರೋಕನ್ ಅಸ್ಸಾಮಿ), ಕಾಶಿ, ನಿಶ್ಚಿ ಇತ್ಯಾದಿ ಭಾಷೆಗಳಿಗೆ ರೋಮನ್/ಇಂಗ್ಲಿಷ್ ಲಿಪಿಯನ್ನು ಅಳವಡಿಸಲಾಗಿದೆ. ಈ ಭಾಷೆಗಳೆಲ್ಲ ಕೋಶಾವಸ್ಥೆಯಲ್ಲಿರುವ ಮೌಖಿಕ ಭಾಷೆಗಳು. ಈ ಕವನ ಸಂಕಲನದಲ್ಲಿ ಸಂಗ್ರಹಿಸಿರುವ ಒಟ್ಟು 54 ಕವಿತೆಗಳಲ್ಲಿ ಅರ್ಧದಷ್ಟು ಕವಿತೆಗಳು ಬುಡಕಟ್ಟು ಭಾಷೆಗಳಲ್ಲಿ ರಚಿಸಿದ್ದರೆ ಉಳಿದ ಅರ್ಧ ಕವಿತೆಗಳನ್ನು ಇಂಗ್ಲಿಷ್ನಲ್ಲಿ ರಚಿಸಲಾಗಿದೆ. ಸ್ಥಳೀಯ ಬುಡಕಟ್ಟು ಭಾಷೆಗಳ ಕವಿತೆಗಳು ಮೊದಲಿಗೆ ಇಂಗ್ಲಿಷ್ ಭಾಷೆಗೆ ಅನುವಾದವಾಗಿ ಎಲ್ಲವನ್ನೂ ನಾನು ಇಂಗ್ಲಿಷ್ ಭಾಷೆಯಿಂದಲೇ ಭಾಷಾಂತರ ಮಾಡಬೇಕಾಯಿತು. ಈ ಕವಿತೆಗಳು ದೇಶದ ಇತರ ಭಾಗಗಳ ಯಾವುದೇ ಭಾಷೆಗೆ ಹೋಲಿಸಿದರೂ ಪ್ರತ್ಯೇಕವಾಗಿ ನಿಲ್ಲುತ್ತವೆ.
-ಡಾ. ಎಂ. ವೆಂಕಟಸ್ವಾಮಿ
©2024 Book Brahma Private Limited.