ಮೋ ಎಂದೇ ಪ್ರಸಿದ್ದರಾಗಿರುವ ವೇಗುಂಟ ಮೋಹನ ಪ್ರಸಾದ್ ಅವರ ತೆಲುಗು ಕವನಗಳ ಕನ್ನಡ ಅನುವಾದವೇ “’ಮೋ ' ನಿಷಾದ” . ತೆಲುಗಿನ ಪೂರ್ವನಿಶ್ಚಿತ ಕಾವ್ಯಪ್ರವಾಹಕ್ಕೆ ಸಿಕ್ಕು ಕಳೆದುಹೋದವರಿಗಿಂತ ಮೋ ಭಿನ್ನ ಬೇಸಾಯದಲ್ಲಿ ತೊಡಗಿದವರು. ಚಲನಶೀಲತೆಯೆಂಬ ಹೆಸರಿನಲ್ಲಿ ಎಲ್ಲವನ್ನು ಕೊಚ್ಚುತ್ತಲೇ ಇದ್ದಲ್ಲೇ ಇದ್ದು ಬಿಟ್ಟ ತೆಲುಗು ಕಾವ್ಯದ ಒಂದು ಘಟ್ಟದ ಜಡತ್ವದ ಕಳೆಯನ್ನು ಸವರಲು ಯೂರೋಪಿಯನ್ ಆಧುನಿಕತೆಯೇ ಸರಿಯಾದ ದಾರಿ ಎಂದು ಅವರು ಪರಿಭಾವಿಸಿದ್ದರೇ?
ಲೋರ್ಕನ ಕೊರಡೋಬವನ್ನು, ನಜೀಂ ಹಿಕ್ಕತ್‌ನ ಜಿಯೋಕೊಂಡ ಮತ್ತು ಸಿಯಾವು ಮೊದಲಾದ ಹೊಸಬದುಕಿನ ಹಂಬಲದ ಕಾವ್ಯನಡೆಯನ್ನು ಅತಿಯಾಗಿ ಮೆಚ್ಚಿಕೊಂಡಂತೆ, ಅದರಿಂದ ಪ್ರಭಾವ ಪಡೆದವರಂತೆ ಬರೆಯುವ ಮೋ ಅತ್ಯುತ್ತಮ ಸ್ವ-ವಿಮರ್ಶಕರೂ ಆಗಿದ್ದರೆನ್ನುವುದಕ್ಕೆ ಅವರು ಆಯ್ತು ರಘುನಾಥ ಅವರಿಗೆ ಅನುವಾದಿಸೆಂದು ಹೇಳಿದ ಕವಿತೆಗಳೇ ಸಾಕ್ಷಿ. ಅವು ಮೋ ಅವರ ವ್ಯಕ್ತಿತ್ವವನ್ನೂ, ಅವರ ಕಾವ್ಯದ ಧಾತು ಧೋರಣೆಯನ್ನೂ ಹಾಗೆಯೇ ಅವರ ಓದಿನ ವಿಸ್ತಾರವನ್ನೂ ಸೂಚಿಸುತ್ತವೆ. ಸ.ರಘುನಾಥ ಅವರು ಮೋ ಅವರ ಕವನಗಳ ಮೂಲ ಆಶಯಗಳಿಗೆ ಧಕ್ಕೆ ಬಾರದಂತೆ ಕನ್ನಡಕ್ಕೆ ಅನುವದಿಸುವಲ್ಲಿ ಯಶಸ್ವಿಯಗಿದ್ದಾರೆ.ತೆಲುಗನ್ನಡ ತೌಲನಿಕ ಅಧ್ಯಯನಗಳಿಗೆ ಹಾಗೂ ಹೆಚ್ಚಿನ ಅನುವಾದಗಳಿಗೆ ಈ ಕೃತಿಯಿಂದ ಪ್ರಯೋಜನವಾಗಲಿದೆ.
©2024 Book Brahma Private Limited.