ಚಿದಂಬರ ನರೇಂದ್ರ ಅವರ ಕಾವ್ಯಾನುವಾದ ಕೃತಿ ‘ಚುಕ್ಕಿ ತೋರಸ್ತಾವ ಚಾಚಿ ಬೆರಳ’ - 'ನೂರಾರು ಸ್ವರಗಳಿಂದ ಹೊಳಲಿಡುತ್ತಿರುವ ಈ ಚುಕ್ಕಿ ತೋರಸ್ತಾವ ಚಾಚಿ ಬೆರಳ ತನ್ನ ಜೀವಧ್ವನಿಯಿಂದ, ಚುಂಬಕ ಶಕ್ತಿಯಿಂದ ಕಾವ್ಯಪ್ರೇಮಿಗಳನ್ನು ಸೆಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ‘ಏಕಾಂತದ ಜಿನುಗು ಲೋಕಾಂತಕಳೆಯಿತು’ ಎಂದರಲ್ಲವೇ ಬೇಂದ್ರೆ..ಒಬ್ಬ ಸಮರ್ಥ ಕವಿ ಮಾಡಿಕೊಳ್ಳುವ ತನ್ನ ಖಾಸಗಿ ಬದುಕಿನ ಅವಲೋಕನಕ್ಕೆ ಹೊರ ಜಗತ್ತಿನ ವಿದ್ಯಾಮಾನಗಳನ್ನು ಅವುಗಳ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳನ್ನು ಸಮಗ್ರವಾಗಿ ಕನ್ನಡಿಸಬಲ್ಲ ರೂಪಕಶಕ್ತಿಯೂ ಇರುತ್ತದೆ. ಚಿದಂಬರ ನರೇಂದ್ರರು ಆಯ್ಕೆ ಮಾಡಿಕೊಂಡಿರುವ ಹಾಗೂ ಅನುವಾದಿಸಿರುವ ಕವಿಗಳು ಕನ್ನಡಿಯ ಮೂಲಕ ತಮ್ಮನ್ನು ತಮ್ಮ ಪರಿಸರವನ್ನು ನೋಡಿಕೊಳ್ಳುವುದರ ಜೊತೆಜೊತೆಗೇ ಕಿಟಕಿಯ ಮೂಲಕ ತಮ್ಮನ್ನು ತಮ್ಮ ಪರಿಸರವನ್ನು ನೋಡಿಕೊಳ್ಳುವುದರ ಜೊತೆಜೊತೆಗೆ ಕಿಟಕಿಯ ಮೂಲಕ ಬಹಿರಂಗ ಜಗತ್ತನ್ನು ಕೂಡಾ ಕಾಣಿಸುತ್ತಾರೆಂದು ಹೇಳಬೇಕು. ಹೀಗೆ ಅಂತರಂಗ-ಬಹಿರಂಗಗಳ ಪಾಕವಾಗಿರುವ ಈ ಕವನಗಳು ತಮ್ಮ ವೈವಿಧ್ಯದಿಂದ ನಮ್ಮನ್ನು ಬೆರಗುಗೊಳಿಸುತ್ತ, ತಮ್ಮ ಧ್ಯನ್ಯರ್ಥಗಳಿಂದ ನಮ್ಮ ಬುದ್ಧಿ, ಭಾವಗಳನ್ನು ಪ್ರಚೋದಿಸುತ್ತ ಅನುಭವದ ಹಲವು ದಿಕ್ಕುಗಳನ್ನು ನಮಗೆ ಕಾಣಿಸುತ್ತವೆ. ಚಿದಂಬರರು ಆಧುನಿಕ ಕನ್ನಡ ಕಾವ್ಯವನ್ನು ಎಷ್ಟು ಸೂಕ್ಷ್ಮವಾಗಿ ಕುರಿತೋದಿದ್ದಾರೆಂಬುದನ್ನು ನಮ್ಮದೇ ಭಾಷೆಯ ನುಡಿಗಟ್ಟುಗಳು, ಲಯಗಳು, ಉಪಮಾಲಂಕಾರಗಳು, ಧ್ವನಿವಿಶೇಷಗಳು, ಹಾಗೆಂದೇ ಇವು ಬೇರೆ ಭಾಷೆಯ ಕವನಗಳನ್ನ ನಮ್ಮದೇ ಕವನಗಳಂತಿವೆ' ಎನ್ನುತ್ತಾರೆ ಎಸ್. ದಿವಾಕರ್.
ಇಲ್ಲಿ ರೂಮಿ, ಖಲೀಲ್ ಗಿಬ್ರಾನ್, ಯೇಟ್ಸ್, ನೆರೂಡ, ಬ್ರೆಖ್ಟ್ ರಂಥ ಹಳೆಯ ಕವಿಗಳ ಜೊತೆಜೊತೆಗೆ ಬುಕೋವ್ ಸ್ಕಿ, ಪೀಯೂಸ್ ಮಿಶ್ರ, ಮೀನ ಕಂದಸ್ವಾಮಿ, ಕೆ. ಸಚ್ಚಿದಾನಂದನ್ ರಂಥ ಆಧುನಿಕ ಕವಿಗಳೂ ಇದ್ದಾರೆ. ಒಳ್ಳೆಯ ಕಾವ್ಯ, ಅದು ಯಾವುದೇ ಕಾಲಘಟ್ಟದಲ್ಲಿ ರಚಿತವಾಗಿರಲಿ, ಸದಾ ಸಮಕಾಲೀನವಾಗಿಯೇ ಇರುತ್ತದೆಯಷ್ಟೆ. ಈ ಮಾತಿಗೆ ಪುರಾವೆಯಾಗಿ ‘ಇಂಥದೊಂದು ದೇಶ ಇದ್ದರೆ’ ಎಂಬ ಕವಿತೆಯ ಜೊತೆ ಕಮಲಾದಾಸ್ ಬರೆದ, ರಾಧೆ ಕವಿತೆಯನ್ನು ಹೋಲಿಸಿ ನೋಡಬಹುದು. ಸಮರ್ಥನಾದೊಬ್ಬ ಕವಿಯಲ್ಲಿರುವುದು ಒಂದನ್ನು ಹೇಳುತ್ತ ಇನ್ನೊಂದನ್ನು ಸೂಚಿಸಬಲ್ಲ ರೂಪಕ ಶಕ್ತಿ, ಅಂಥ ರೂಪಕ ಶಕ್ತಿ ಧಾರಾಳವಾಗಿರುವ ಇಲ್ಲಿನ ಕವನಗಳು ಈ ರೂಪದಲ್ಲಿ ದೊರೆಯುತ್ತಿರುವುದು ಕಾವ್ಯಪ್ರಿಯರ ಅದೃಷ್ಟ ಎನ್ನಬಹುದು.
©2024 Book Brahma Private Limited.