ರಾಮದುರ್ಗ ಸಂಸ್ಥಾನ: ವಿಮೋಚನಾ ಹೋರಾಟ-ಕೃತಿಯನ್ನು ಡಾ. ಎ.ಬಿ. ವಗ್ಗರ ಹಾಗೂ ಎಂ.ಆರ್. ಜರಕುಂಟೆ ಅವರು ರಚಿಸಿದ್ದು, ರಾಮದುರ್ಗ ಸಂಸ್ಥಾನದಿಂದ ವಿಮೋಚನೆ ಪಡೆಯುವ ಪ್ರಜೆಗಳ ಹೋರಾಟದ ವಿವಿಧ ಮಜಲುಗಳನ್ನು ಗುರುತಿಸಿದ್ದಾರೆ.
ಸಂಸ್ಥಾನದ ರಾಜಕೀಯ ಹಿನ್ನೆಲೆ, ಆರ್ಥಿಕ-ಶೈಕ್ಷಣಿಕ ಹಾಗೂ ಆಡಳಿತ ವ್ಯವಸ್ಥೆ, ಸಂಸ್ಥಾನಿ ಪ್ರಜೆಗಳ ಬಂಡಾಯ, ಧ್ವಜಸ್ತಂಭ ಹಾಗೂ ಜೈಲು ಘಟನೆ, ದಾವರ ವಿಚಾರಣಾ ಸಮಿತಿ, ಗಾಂಧೀಜಿ ಹೋರಾಟಕ್ಕೆ ಸ್ಪಂದನೆ ಹಾಗೂ ಸಂಸ್ಥಾನದ ಏಕೀಕರಣ ಹೀಗೆ ವಿವಿಧ ಅಧ್ಯಾಯಗಳ ಮೂಲಕ ರಾಮದುರ್ಗ ಸಂಸ್ಥಾನದಿಂದ ಸ್ವಾತಂತ್ಯ್ರಕ್ಕಾಗಿ ಆಗ್ರಹಿಸಿ ನಡೆದ ಆಂದೋಲನಗಳನ್ನುವ್ಯವಸ್ಥಿತವಾಗಿ ಅಧ್ಯಯನದ ಚೌಕಟ್ಟಿಗೆ ಒಳಪಡಿಸಲಾಗಿದೆ.
ಇತಿಹಾಸ ತಜ್ಞ ರಣಜೀತ ಗುಹಾ ಅವರ ಪ್ರಕಾರ ‘ಉನ್ನತ ವರ್ಗಗಳು ನ್ಯಾಯಾಂಗ ಬದ್ಧವಾಗಿ ಇರುವುದರ ಜೊತೆಗೆ ಸಾಂವಿಧಾನಿಕ ಹೋರಾಟಗಳ ಮಿತಿಯನ್ನು ಹೊಂದಿರುತ್ತವೆ. ಆದರೆ, ಕೆಳಸ್ತರದ ಹೋರಾಟಗಳು ಹಿಂಸಾತ್ಮಕವಾಗಿರುತ್ತವೆ’ ಎಂಬ ಅಭಿಪ್ರಾಯಕ್ಕೆ ವಿರುದ್ಧವಾಗಿ ರಾಮದುರ್ಗ ಸಂಸ್ಥಾನದ ವಿಮೋಚನಾ ಹೋರಾಟವು ಹಿಂಸಾತ್ಮಕವಾಗಿರದೇ ವ್ಯವಸ್ಥಿತ ವಾಗಿತ್ತು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಕೃತಿಗೆ ಮುನ್ನುಡಿ ಬರೆದ ಇತಿಹಾಸ ತಜ್ಞ ಡಾ. ಅಶೋಕ ಶೆಟ್ಟರ್ ‘ರಾಮದುರ್ಗದಲ್ಲಿ ನಡೆದ (1939 ಏ.7) ಹಿಂಸಾತ್ಮಕ ಘಟನೆಗಳನ್ನು ವಿಸ್ತೃತವಾಗಿ ವಿಶ್ಲೇಷಿಸಿಲ್ಲ. ಈ ಘಟನೆಯಿಂದ ಉಂಟಾದ ಕಂಪನಗಳು ಕೇವಲ ರಾಮದುರ್ಗಕ್ಕಷ್ಟೇ ಸೀಮಿತವಾಗಿ ಉಳಿಯಲಿಲ್ಲ. ಆ ಕಂಪನಗಳಲ್ಲಿ ಒಂದು ಆಯಾಮವನ್ನು ಲೇಖಕರು ಸಂಕ್ಷಿಪ್ತವಾಗಿ ನೀಡಿದ್ದಾರೆ. ಈ ಘಟನೆಯ ಒಟ್ಟು ಸ್ಥಿತಿಯ ಸಂಕೀರ್ಣತೆಯ ಬಗ್ಗೆ ಸಮಗ್ರವಾಗಿ ಅರಿವಿಗೆ ದಕ್ಕುವುದಿಲ್ಲ. ಏಕೆಂದರೆ, ಸಾಂಘಿಕವಾಗಿ ರಾಮದುರ್ಗ ಪ್ರಜೆಗಳ ಆಂದೋಳನವು ಅಕಾಲಿಕವಾಗಿ ಆಂತ್ಯಗೊಂಡ ಹಂತಕ್ಕೆ ಇಲ್ಲಿಯ ಕಥನ ಕೊನೆಗೊಂಡಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.