ಹಂಪಿ ಇತಿಹಾಸ ಕುರಿತು ಹಲವು ಕುತೂಹಲಕಾರಿ ವಿಷಯಗಳನ್ನು ವಿವರಿಸುವ ಕೃತಿ; ಕುಮಾರ ಅಂಕನಹಳ್ಳಿಯವರ ’ಬಯಲಾದ ಹಂಪಿ’. ಈ ಕೃತಿಯು ಮುಖ್ಯವಾಗಿ ಶೈವ ಮತ್ತು ವೈಷ್ಣವರ ಘರ್ಷಣೆಯ ಫಲ. ಕನ್ನಡ -ತೆಲುಗಿನವರ ಘರ್ಷಣೆಯಿಂದಾಗಿ ಹಂಪಿ ನಾಶವಾಯಿತೆಂಬುದನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ. ರಾಜಕೀಯ ಹಾಗೂ ಧಾರ್ಮಿಕ ವೈರತ್ವವೇ ಹಂಪಿ ವಿನಾಶಕ್ಕೆ ಕಾರಣ ಎಂಬುದನ್ನು ವಿಶ್ಲೇಷಿಸುತ್ತದೆ.
ಲೇಖಕ ಕುಮಾರ್ ಅಂಕನಹಳ್ಳಿ ಅಭಿಪ್ರಾಯಪಟ್ಟು, "ಹಂಪಿ ಎನ್ನುವುದು ಒಂದು ಬೆರಗು, ಕೌತುಕ, ನಿಗೂಢ! ಶೈವ ಪರಂಪರೆಯ ಹಾಲುಮತದ ಹಕ್ಕ ಬುಕ್ಕರಿಂದ ಸ್ಥಾಪಿತ ವಿಜಯನಗರ ಸಾಮ್ರಾಜ್ಯದ ನಿಜ ಸಾಮ್ರಾಟ ಅಲ್ಲಿನ ಅಧಿದೇವತೆ- ವಿರೂಪಾಕ್ಷ. ತುಳುನಾಡಿನ ಸಾಳ್ವರು ಆಡಳಿತಕ್ಕೆ ಬರುವವರೆಗೆ ಬುಕ್ಕದೇವರಾಯ, ಪ್ರೌಢದೇವರಾಯರೆಲ್ಲ ವಿರುಪಾಕ್ಷನ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಿದ್ದರು. ತುಳುನಾಡಿನ ವೈಷ್ಣವ ಪಂಥದ ಸಾಳ್ವರು ವಿರುಪಾಕ್ಷನ ಹೆಸರನ್ನು ತೆಗೆದು ’ಶ್ರೀರಾಮ’ ಎಂಬ ಅಂಕಿತ ಬಳಸಿದರು. ತುಳುವ ನರಸನಾಯಕನ ಉಪಪತ್ನಿ, ತೆಲುಗು ಭಾಷೆಯ ನಾಗಲಾದೇವಿಯ ಮಗ ಕೃಷ್ಣದೇವರಾಯನನ್ನು ನರಸನಾಯಕನ ಮಂತ್ರಿಯಾಗಿದ್ದ ತೆಲುಗರ ತಿಮ್ಮರಸನು ಪಟ್ಟಕ್ಕೆ ತಂದನು. ಕೃಷ್ಣದೇವರಾಯನು ತನ್ನ ಆಸ್ಥಾನದಲ್ಲಿ ತೆಲುಗು ಪಂಡಿತರಿಗೆ ಸಾಕಷ್ಟು ಸ್ಥಾನಮಾನಗಳನ್ನು ನೀಡಿದ್ದಲ್ಲದೆ ವೈಷ್ಣವ ಗುಡಿಗಳನ್ನು ಕಟ್ಟಿಸಿದನು. ಈ ಎಲ್ಲ ಬೆಳವಣಿಗೆಯು ಮೂಲತಃ ಶೈವ ಸಾಮ್ರಾಜ್ಯವಾಗಿದ್ದನ್ನು ವೈಷ್ಣವವಾಗಿಸಿದ್ದು, ಸಹಜವಾಗಿ ಶೈವ-ವೈಷ್ಣವಲ್ಲದೆ ಕನ್ನಡ-ತೆಲುಗು ವೈರತ್ವಕ್ಕೆ ಕೂಡ ನಾಂದಿಯಾಯಿತು ಎಂದು ವಿಶ್ಲೇಷಿಸುತ್ತಾರೆ. ಹೀಗೆ ಹಂಪಿಯ ನಿಗೂಢ ಇತಿಹಾಸವನ್ನು ಬೆಳಕಿಗೆ ತರುವ ಪ್ರಯತ್ನ ಇಲ್ಲಿದೆ.
©2024 Book Brahma Private Limited.