ಲೇಖಕ ಡಾ. ಪಿ.ವಿ. ಕೃಷ್ಣಮೂರ್ತಿ ಅವರ ಕೃತಿ-ಬಾಣರಸರ ಶಾಸನಗಳು. ದಕ್ಷಿಣ ಭಾರತದ ವಿಶೇಷವಾಗಿ ಕರ್ನಾಟಕದ ಚರಿತ್ರೆಯಲ್ಲಿ ಹಲವು 'ಮೈನರ್ ಡೈನಸ್ಟಿಸ್' ಉಲ್ಲೇಖಗೊಂಡಿದ್ದರೂ ಅವುಗಳ ಕುರಿತಂತೆ ವಿಸ್ತೃತ ಅಧ್ಯಯನ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನ ಮಹತ್ವ ಪಡೆದಿದೆ. ಅಧ್ಯಯನದ ವ್ಯಾಪ್ತಿ, ಪ್ರದೇಶ, ಕಾಲಘಟ್ಟಗಳಲ್ಲಿನ ಅನಿರ್ದಿಷ್ಟತೆಗಳೇ ಒಂದು ಸವಾಲಾಗಿದ್ದರೂ, ವ್ಯಾಪಕ ಕ್ಷೇತ್ರಕಾರ್ಯ ಮತ್ತು ಶಾಸನೋಕ್ತ ಮಾಹಿತಿಗಳನ್ನು ಒಗ್ಗೂಡಿಸಿರುವ ಜಾಣ್ಮೆ, ಪರಿಶ್ರಮ ಶ್ಲಾಘನೀಯ,
ಪ್ರಭಾವಿ ಸಾಮ್ರಾಜ್ಯಗಳ ಸಂಘರ್ಷದಲ್ಲಿ ಪಾತ್ರ ವಹಿಸಿಯೂ, ಮುಂಚೂಣಿಯಲ್ಲಿ ಕಾಣಿಸಿಕೊಳ್ಳದಿದ್ದರೂ ಅಂದಿನ ಕಾಲಘಟ್ಟದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಕಲೆ, ವಾಸ್ತುಶಿಲ್ಪದ ವಲಯಗಳಲ್ಲಿ ಬಾಣರಸರ ಛಾಪನ್ನು ಗುರುತಿಸುವಲ್ಲಿನ ಪ್ರಯತ್ನ ಇದಾಗಿದ್ದು, ಚರಿತ್ರೆಯ ಕಳಚಿದ ಕೊಂಡಿಗಳನ್ನು ಕಟ್ಟಿಕೊಡುವ ದಿಟ್ಟ ಪ್ರಯತ್ನವಾಗಿದ್ದು, ಸೂಕ್ಷ್ಮ ಆಧ್ಯಯನ ವ್ಯಾಪ್ತಿಯಲ್ಲಿ ಈ ಅಧ್ಯಯನ ಒಂದು ಮೌಲ್ದಯಯುತ ಕೊಡುಗೆಯಾಗಿದೆ.
ಲಭ್ಯವಿರುವ ಕೆಲವೇ ಶಾಸನಗಳನ್ನು ಬಳಸಿದ್ದರೂ ಸಹ ಅವುಗಳಲ್ಲಿನ ಒಳನೋಟಗಳನ್ನು ಗ್ರಹಿಸಿ ಚಾರಿತ್ರಿಕ ಚೌಕಟ್ಟಿಗೆ ಹೊಂದಿಸುವಲ್ಲಿನ ಪ್ರಕ್ರಿಯೆ ಗಮನ ಸೆಳೆಯುತ್ತದೆ. ಬಾಣರ ಶಾಸನಗಳು ಕಟ್ಟಿಕೊಡುವ ಸಾಂದ್ರವಾದ ಇತಿಹಾಸ, ಇದರ ಪರಿಣಾಮವಾಗಿ, ಲೇಖಕರು ಬಾಣರ ಬಗ್ಗೆ ಹಲವು ಆಯಾಮಗಳಿಂದ ತಲಸ್ಪರ್ಶಿಯಾದ ಗಮನವನ್ನು ಹರಿಸುವಂತಾಗಿದೆ. ಬಾಣರ ಭೌಗೋಳಿಕ ಅಧ್ಯಯನ, ಅವರ ಶಾಸನಗಳ ಸ್ವರೂಪ ಮತ್ತು ಅದರ ಭೌಗೋಳಿಕ ವಿತರಣಾ ವ್ಯವಸ್ಥೆಯನ್ನು, ಆರ್ಥಿಕ, ಜಾತಿ-ವೃತ್ತಿಗಳು, ಸ್ತ್ರೀ, ವೀರತ್ವ, ಶಿಲ್ಪಕಲೆ, ಭಾಷೆ ಮುಂತಾದವುಗಳ ಕುರಿತು ಅಧ್ಯಯನವನ್ನು ನಡೆಸಲು ಸಾಧ್ಯವಾಗಿದೆ. ಇಲ್ಲಿ ಲೇಖಕರು ಯಾವುದೇ ವೈಧಾನಿಕತೆಗೆ ಕಟ್ಟುಬೀಳದೆ ತಮ್ಮ ಚರ್ಚೆಗೆ ತೆಗೆದುಕೊಂಡಿರುವ ಭಾಗಗಳಲ್ಲಿ ಶಾಸನಗಳಲ್ಲಿ ಸಾಂಧ್ರವಾಗಿರುವ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ವಿಫುಲವಾದ ಮಾಹಿತಿಯನ್ನು ಒದಗಿಸಿರುತ್ತಾರೆ.
ಅರಸುಮನೆತನವೊಂದರ ಚರಿತ್ರೆಯನ್ನು ಮೈತ್ರಿ ನಿಷ್ಠೆ, ರಾಜಕೀಯ ಸಂಘರ್ಷಗಳನ್ನು ಪ್ರತ್ಯೇಕವಾಗಿ ನೋಡದೆ ಹಲವು ಅರಸು ಮನೆತನಗಳ ಆಳ್ವಿಕೆಯ ಸಂದರ್ಭದಲ್ಲಿ ಇಟ್ಟು ನೋಡುವ ಸಾಧ್ಯತೆಯ ಕಡೆ ಗಮನ ಹರಿಸಿದ್ದಾರೆ. ನಾಡುಗಳನ್ನು ಕೃತಕ ಆಡಳಿತ ಘಟಕಗಳೆಂದು ಬಗೆಯದೆ ಭೌಗೋಳಿಕ ಘಟಕವಾಗಿ ನೋಡುವುದರ ಮೂಲಕ ಹೊಸಬೆಳಕನ್ನು ನೀಡಿದ್ದಾರೆ. ರಾಜಕೀಯ ಭೌಗೋಳಿಕತೆಯ ಮೂಲಕ ಪಿ.ವಿ.ಕೆ. ಅವರು ಕಟ್ಟಿದ ಹೊಸ ಚರ್ಚೆಗಳು ಕನ್ನಡ ಸಂಶೋಧಕರಿಗೆ ಹೊಸ ಹೊಳಹುಗಳನ್ನು ನೀಡುವಂತಾಗಬೇಕು. ದೇಶ ಭಾಷೆಗಳ ಇತಿಹಾಸದಲ್ಲಿ ಪಿ.ವಿ. ಕೃಷ್ಣಮೂರ್ತಿಯವರ 'ಬಾಣರಸರ ಶಾಸನಗಳು: ಒಂದು ಅಧ್ಯಯನ' ಕೃತಿಯು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಗಮನಾರ್ಹವಾದ ಕೊಡುಗೆಯಾಗಿದೆ. ಮೊದಲ ಸಹಸ್ರಮಾನದ ಕರ್ನಾಟಕದ ಕಿರು ಅರಸುಮನೆತನಗಳ ಚರಿತ್ರೆಯನ್ನು ಪುನಾರಚಿಸುವಾಗ ಈ ಕೃತಿಯನ್ನು ಗಮನಿಸದೇ ನಡೆಸುವ ಅಧ್ಯಯನಗಳು ಅಪೂರ್ಣವೆಂದೇ ಹೇಳಬೇಕು.
©2024 Book Brahma Private Limited.