‘ಕರ್ನಾಟಕದ ನಾಥಪಂಥ’ ರಹಮತ್ ತರೀಕೆರೆ ಅವರ ಕೃತಿ. ಕರ್ನಾಟಕದ ಜನಸಮುದಾಯಗಳ ಸಾಮಾಜಿಕ ಧಾರ್ಮಿಕ ಬದುಕಿನಲ್ಲಿ ಕಾಪಾಲಿಕ, ಕಾಳಾಮುಖ, ನಾಥ, ಶಾಕ್ತ, ಸೂಫೀ, ಬೌದ್ಧ, ಆರೂಢ, ಶರಣ ಮುಂತಾದ ದರ್ಶನ ಹಾಗೂ ಪಂಥಗಳ ಅಂಶಗಳು ಹಲವು ರೂಪಗಳಲ್ಲಿ ಅಡಗಿವೆ ಎನ್ನುತ್ತಾರೆ ಲೇಖಕ ರಹಮತ್ ತರೀಕೆರೆ.
ಶರಣ ಪಂಥ ಮೇಲಾಗಿರುವಂತೆ, ಉಳಿದ ಪಂಥಗಳ ಮೇಲೆ ಆಗಬೇಕಾದಷ್ಟು ಅಧ್ಯಯನ ನಡೆದಿಲ್ಲ. ಅದರಲ್ಲೂ ನಾಥರ ಬಗ್ಗೆ ನಡೆದ ಅಧ್ಯಯನ ತೀರ ಕಡಿಮೆ. ಭಾರತದ ಪ್ರಾಚೀನ ಪಂಥಗಳಲ್ಲಿ ಒಂದಾಗಿರುವ ನಾಥವು, ನೇಪಾಳ ಟಿಬೆಟ್ ಆಫಘಾನಿಸ್ತಾನ, ಪಾಕಿಸ್ತಾನ ಒಳಗೊಂಡಂತೆ ದಕ್ಷಿಣ ಏಶಿಯಾದ ತುಂಬ ಹರಡಿತ್ತು. ದಕ್ಷಿಣ ಭಾರತದಲ್ಲಿ ಅದು ಕರ್ನಾಟಕದಲ್ಲಿ ಮಾತ್ರ ಇದೆ ಕಳೆದ 10 ಶತಮಾನಗಳಿಂದ. ನಾಡಿನಾದ್ಯಂತ ಇರುವ ಮಠಗಳು, ಜೋಗಿ-ಸಿದ್ಧ-ಭೈರವ ಹೆಸರಿನಲ್ಲಿರುವ ಊರು, ಗವಿ, ಬೆಟ್ಟ, ಕೊಳ್ಳ, ಕಣಿವೆ, ಗುಡಿ, ಸಮಾಧಿ,, ಶಿಲ್ಪ ಹಾಗೂ ಶಾಸನಗಳು, ಅದರ ಅಸ್ತಿತ್ವದ ಕುರುಹುಗಳು. ಅಲ್ಲಮನನ್ನು ಒಳಗೊಂಡಂತೆ ಅನೇಕ ಯೋಗಿಗಳು ನಾಥರನ್ನು ಮುಖಾಮುಖಿ ಮಾಡುವ ಕಥನಗಳು ಕನ್ನಡ ಸಾಹಿತ್ಯದಲ್ಲಿವೆ ಎಂದಿದ್ದಾರೆ.
ಹಾಗೆಂದು ನಾಥವು ಗತಕಾಲಕ್ಕೆ ಸಂದುಹೋಗಿರುವ ಪಂಥವಲ್ಲ. ಅದನ್ನು ಬದುಕುತ್ತಿರುವ ಕಾಪಾಲಿಕ ಜೋಗಿ ಹಣಗಿ ಮುಂತಾದ ಜೀವಂತ ಸಮುದಾಯ ಗಳಿವೆ. ಅವುಗಳ ನಿತ್ಯಬದುಕಿನಲ್ಲಿರುವ ಆಚರಣ ಲೋಕವಿದೆ. ಈ ಆಚರಣೆಗಳು ಅವರ ದುಡಿಮೆಯ ಲೋಕಕ್ಕೆ ಸಂಬಂಧಪಟ್ಟಿವೆ. ಇವನ್ನೆಲ್ಲ ಇಟ್ಟುಕೊಂಡು ಪ್ರಸ್ತುತ ಅಧ್ಯಯನ ನಡೆಸಲಾಗಿದೆ. ಈ ಹಿನ್ನೆಲೆಯಿಂದ ಇದು ನಾಥಪಂಥದ ಕೇವಲ ಗತದ ಚಿತ್ರವೂ ಅಲ್ಲ. ವರ್ತಮಾನದ ವರದಿಯೂ ಅಲ್ಲ. ಎರಡನ್ನೂ ಬೆರೆಸಿದ ಸಂಸ್ಕೃತಿ ಕಥನ. ಚರಿತ್ರೆಯ ಗತವೂ ವರ್ತಮಾನದ ಪಲ್ಲಟವೂ ಬೇರೆಯಾಗಿರಲು ಸಾಧ್ಯವಿಲ್ಲ. ಅವು ಒಂದರೊಳಗೊಂದು ಬೇರ್ಪಡಿಸಲಾಗದಂತೆ ಬೆಸೆದುಕೊಂಡಿರುತ್ತವೆ ಎಂಬುದನ್ನೂ ಕಾಣಬಹುದು.
©2024 Book Brahma Private Limited.