ನಾಡಪ್ರಭು ಕೆಂಪೇಗೌಡರ ಕಾಲದ ಕೋಟೆ ಇರುವ, ನಾಲ್ಕು ಗಿರಿಗಳ ನಡುವೆ ಇದ್ದು ಸಿದ್ಧರ ಸ್ಥಳವೆಂದೇ ಖ್ಯಾತಿವೆತ್ತ ‘ಹುಲಿಯೂರುದುರ್ಗ’ ಇತಿಹಾಸವನ್ನು ಸಾರುವ ಸಂಗ್ರಹ ಯೋಗ್ಯ ಕೃತಿ `ಹುಲಿಯೂರ ಸೊಗಡು’. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದ ಸಮಗ್ರ ಇತಿಹಾಸವನ್ನು ಕೃತಿಕಾರರು ಅಧ್ಯಯನ ಮಾಡಿ ಸ್ಥಳ ಪ್ರಾಮುಖ್ಯತೆಯನ್ನು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ಚಿತ್ರಕಾಯಪುರವಾಗಿದ್ದ ಈ ಗ್ರಾಮ ನಂತರ ವ್ಯಾಘ್ರಪುರ, ಹುಲಿಕಲ್ಲುದುರ್ಗ, ಹುಲಿಯೂರುದುರ್ಗವಾಗಿ ಬದಲಾದದ್ದನ್ನು ಕೃತಿಯಲ್ಲಿ ಅರಿಯಬಹುದು. ಕೆಂಪೇಗೌಡರ ವಂಶಾವಳಿ, ಕುಂಭಿ ಬೆಟ್ಟ, ಹೇಮಗಿರಿ ಬೆಟ್ಟ, ಶಾಸನಗಳು, ಶ್ರೀಕ್ಷೇತ್ರಗಳ ಐತಿಹ್ಯಗಳು, ಜನಪದಗಳು, ಮಠಗಳು ಇನ್ನಿತರೇ ಅಂಶಗಳು ಇಲ್ಲಿವೆ.
ಜೂನ್ 1791ರಲ್ಲಿ ಬ್ರಿಟಿಷ್ ಚಿತ್ರ ಕಲಾವಿದ ಕ್ಯಾಪ್ಟನ್ ಅಲೆಕ್ಸಾಂಡರ್ ಅಲ್ಲೆನ್ ಅವರ ಕುಂಚದಿಂದ ಮೂಡಿ ಬಂದ ಹುಲಿಯೂರುದುರ್ಗದ ಏಳು ಸುತ್ತಿನ ಕೋಟೆಯನ್ನು ಕೃತಿಯ ಮುಖಪುಟದಲ್ಲಿ ಗಮನಿಸಬಹುದು. ಕ್ರಿ. ಶ. 1774 ರಿಂದ 1852 ರವರೆಗೆ ತಾಲ್ಲೂಕು ಕೇಂದ್ರವಾಗಿದ್ದು, 1742ರಲ್ಲಿ ಲಾರ್ಡ್ ಕಾರ್ನ್ ವಾಲೀಸನು ಹುಲಿಯೂರುದುರ್ಗದ ಕೋಟೆಯನ್ನು ನಾಶ ಪಡಿಸಲು ಯತ್ನಿಸಿದ್ದು, 19ನೇ ಜೂನ್ 1791ರಂದು ಲೆಫ್ಟಿನೆಂಟ್ ಕರ್ನಲ್ ರಾಸನು ತನ್ನ ಸೈನ್ಯದೊಂದಿಗೆ ಬಿಡಾರ ಹೂಡಿದ್ದು ಇನ್ನಿತರೆ ಅಂಶಗಳು ಚಾರಿತ್ರಿಕ ಹಿನ್ನೆಲೆಯಲ್ಲಿ ನಿರೂಪಿಸಲ್ಪಟ್ಟಿರುವುದು ಲೇಖಕರ ಅಧ್ಯಯನಶೀಲತೆಗೆ ಸಾಕ್ಷಿ.
©2024 Book Brahma Private Limited.