ಲೇಖಕ ರವಿಕುಮಾರ್ ನೀಹ ಅವರ ಕೃತಿ ಅರಸು ಕುರನ್ಗರಾಯ. ದೇಶದಲ್ಲಿ ದಲಿತರು ರಾಜರಾದ ಸಂಗತಿ ಇತಿಹಾಸದಲ್ಲಿ ಕಾಣುವುದಿಲ್ಲ, ಜಾತಿಯ ಕಾರಣಕ್ಕೆ ಇತಿಹಾಸಕಾರರೂ ಅವರನ್ನು ಅಲಕ್ಷಿಸಿದ್ದಾರೆ ಎಂಬ ವಾದವೂ ಇದೆ. ಆದರೆ ಈಗಿನ ತುಮಕೂರು ಜಿಲ್ಲೆ ಸಿದ್ದರಬೆಟ್ಟ ಹಿಂದಿನ ಸುವರ್ಣ ಗಿರಿ ಸಂಸ್ಥಾನದಲ್ಲಿ ಮಣೆಗಾರ ಸಮುದಾಯದ ಕುರಂಗರಾಯ ರಾಜನಾಗಿ ಆಳ್ವಿಕೆ ನಡೆಸಿದ್ದ ಎಂಬ ಬಗ್ಗೆ ಚರ್ಚೆ ನಡೆದಿದೆ. ಜಿಂಕೆ ರಂಗರಾಯನಾಗಿದ್ದ ಕುರಂಗರಾಯ 16 ಮತ್ತು 17 ನೇ ಶತಮಾನದಲ್ಲಿ ರಾಜನಾಗಿದ್ದ. ಲಿಖಿತವಾಗಿ ಕುರಂಗರಾಜನ ಬಗ್ಗೆ ಮಾಹಿತಿ ಸಿಗದೇ ಇದ್ದರೂ ಮೌಖಿಕವಾಗಿ ಈತ ರಾಜನೆಂದೆ ಜನಜನಿತನಾಗಿದ್ದಾನೆ. ಸಿದ್ದರಬೆಟ್ಟದಲ್ಲಿ ಇರುವ ಗಲ್ಲೆಬಾನಿ, ಕುಲುಮೆಬಾರೆ, ವಾಲಗರ ಬಂಡೆ ಮುಂತಾದವು ದಲಿತ ವ್ಯಕ್ತಿ ರಾಜನಾಗಿದ್ದ ಎಂದು ಹೇಳುತ್ತದೆ. ಕುರಂಗರಾಜನ ಬಗ್ಗೆ ಈ ಹಿಂದೆ ತುಮಕೂರಿನ ಡಾ. ಓ. ನಾಗರಾಜ್ ಪುಸ್ತಕ ಬರೆದಿದ್ದರು. ನಾನು ಕೂಡ ಕನ್ನಡಪ್ರಭ ದಲ್ಲಿ ಲೇಖನ ಬರೆದಿದ್ದೆ. ಈಗ ಗೆಳೆಯ ಹಾಗೂ ಸಂಸ್ಕೃತಿ ಚಿಂತಕ ರವಿಕುಮಾರ ನೀಹ ಅರಸು ಕುರನ್ಗರಾಯ ಎಂಬ ಪುಸ್ತಕವನ್ನು ತಳಸ್ಪರ್ಶಿಯಾಗಿ ಬರೆದಿದ್ದಾರೆ ಎಂಬುದು ಉಗಮ ಶ್ರೀನಿವಾಸ ಅವರ ಮಾತು.
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೋಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ- ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ...
READ MORE