ಡಾ. ಎಸ್.ಕೆ.ಅರುಣಿ ಅವರು ಬರೆದ ಕೃತಿ-ಕರ್ನಾಟಕ ಇತಿಹಾಸದ ಅನ್ವೇಷಣೆಗಳು. ಇತಿಹಾಸದಲ್ಲಿ ಸಾಮಾನ್ಯವಾಗಿ ಅರಸು ಮನೆತನಗಳ ಯುದ್ಧಗಳು, ಸಾಮ್ರಾಜ್ಯದ ವಿಸ್ತರಣೆ, ಅರಮನೆಗಳು-ಕೋಟೆಗಳು, ಅವರ ವಹಿವಾಟುಗಳು, ವೈಭೋಗ, ವೈಭವ, ಕಾಲಾಳು, ಕುದುರೆಗಳು, ಆನೆಗಳು ಇತ್ಯಾದಿ ಒಟ್ಟು ವಿವರಣೆ ಇರುತ್ತದೆ. ಆದರೆ, ರಕ್ಷಣಾ ವ್ಯವಸ್ಥೆಯ ಸಮಗ್ರ ನೋಟ ನೀಡುವುದು ಹಾಗೂ ನಗರೀಕರಣ ವ್ಯವಸ್ಥೆ ಬೆಳೆಸುವ ವಿಧಾನಗಳ ಹಾಗೂ ದಾಖಲೀಕರಣ ಕುರಿತು ಸಂಶೋಧನಾತ್ಮಕ ಕೃತಿಗಳು ವಿರಳ. ಈ ಹಿನ್ನೆಲೆಯಲ್ಲಿ, ‘ಕರ್ನಾಟಕ ಇತಿಹಾಸದ ಅನ್ವೇಷಣೆಗಳು’ ಕೃತಿಯು ಈ ಕೊರತೆಯನ್ನು ನೀಗಿಸುತ್ತದೆ.
ಕೃತಿಯ ವಿಷಯದ ಸರಳೀಕರಣಕ್ಕಾಗಿ ಲೇಖಕರು ಪರಿವಿಡಿಯಲ್ಲಿ ಎರಡು ವಿಭಾಗಗಳನ್ನು ಮಾಡಿದ್ದಾರೆ. ವಿಭಾಗ-1 ರಲ್ಲಿ; ಭಾರತೀಯ ಕೋಟೆಗಳು : ಒಂದು ಸಮೀಕ್ಷೆ, ಕರ್ನಾಟಕದ ಕೋಟೆಗಳು: ಒಂದು ಅವಲೋಕನ, ಕಲಬುರ್ಗಿ ಕೋಟೆ: ಇತ್ತೀಚಿನ ಅಧ್ಯಯನ, ನಂದಿದುರ್ಗ ಕೋಟೆಯ ರಚನೆ ಮತ್ತು ಸ್ಮಾರಕಗಳ ಸಮೀಕ್ಷೆ, ದೇವರಾಯನದುರ್ಗದ ಇತಿಹಾಸ ಮತ್ತು ಸ್ಮಾರಕಗಳು, ಹುಡೇವು: ಮಧ್ಯಕಾಲೀನ ಡೆಕ್ಕನ್ ಗ್ರಾಮ ರಕ್ಷಣಾ ವಾಸ್ತು-ಒಂದು ಅವಲೋಕನ, ವಿಭಾಗ-2ರಲ್ಲಿ; ಬಹಮನಿ ರಾಜ್ಯದ ರಾಜಧಾನಿ ನಗರಗಳು: ಒಂದು ವಿಶ್ಲೇಷಣೆ, ಬೀದರ ನಗರ ರಚನೆ ಹಾಗೀ ಇತರೆ ನಗರಗಳ ಮೇಲೆ ಪ್ರಭಾವ, ಬಹಮನಿ ವಾಸ್ತುಶಿಲ್ಪ; ಇತ್ತೀಚಿನ ಹೊಸ ಶೋಧನೆಗಳು ಹಾಗೂ ಜೇಮ್ಸ್ ವೆಲ್ಷ್ ಕಂಡ ಬಿಜಾಪುರ ಹೀಗೆ ವಿಷಯದ ವರ್ಗೀಕರಣ ಮಾಡಲಾಗಿದೆ.
‘ಇತಿಹಾಸ ದರ್ಪಣ’ ಸಂಪಾದಕ ಹಂ.ಗು.ರಾಜೇಶ್ ಅವರು ಕೃತಿಗೆ ಮುನ್ನುಡಿ ಬರೆದು ‘ನಗರ ಹಾಗೂ ಕೋಟೆಗಳ ಸಂಯೋಜಿತ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ಪ್ರೇರೇಪಿಸುತ್ತದೆ. ನಗರೀಕರಣ ಹಾಗೂ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಅಧ್ಯಯನಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಈ ಕೃತಿಯು ಮಹತ್ವದ ಸೂಚನೆಗಳನ್ನು ನೀಡುತ್ತದೆ. 1928ರಲ್ಲಿ, ಜೇಮ್ಸ್ ವೆಲ್ಷ್ ಎಂಬಾತ ಬಿಜಾಪುರವನ್ನು ಸಂದರ್ಶಿಸಿ ಅಲ್ಲಿಯ ನಗರ ವ್ಯವಸ್ಥೆ ಹಾಗೂ ರಕ್ಷಣ ವ್ಯವಸ್ಥೆಕುರಿತು ದಾಖಲಿಸಿದ ಸಂಗತಿಗಳ ಕುರಿತ ವಿವರಣೆಯು ಕೊನೆಯ ಅಧ್ಯಾಯದಲ್ಲಿದ್ದು, ಇಂತಹ ಬರಹಗಳು ವಿರಳವೆಂದೇ ಹೇಳಬೇಕು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.