‘ಕೃಷ್ಣದೇವರಾಯ: ಆಯ್ದ ಲೇಖನ ಸಂಪುಟ’ ಕೃತಿಯು ಎ. ಮುರಿಗೆಪ್ಪ ಅವರ ಪ್ರಧಾನ ಸಂಪಾದಕತ್ವದ ಕೃತಿ. ಡಿ. ವಿ ಪರಮಶಿವಮೂರ್ತಿ, ವಾಸುದೇವ ಬಡಿಗೇರ, ವಿರೂಪಾಕ್ಷಿ ಪೂಜಾರಹಳ್ಳಿ ಕೃತಿಯ ಸಂಪಾದಕರು. ದಕ್ಷಿಣ ಭಾರತದ ಪ್ರಬಲ ಸಾಮ್ರಾಜ್ಯಗಳಲ್ಲಿ ವಿಜಯನಗರ ಸಾಮ್ರಾಜ್ಯವು ಸಹ ಒಂದು ಎನ್ನುವುದನ್ನು ವಿಶ್ಲೇಷಿಸುತ್ತದೆ. ಭಾರತೀಯ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರವಾದದ್ದು. ಪ್ರಪಂಚದ ನಾನಾ ದೇಶಗಳಿಂದ ವಿದೇಶಿ ಪ್ರವಾಸಿಗರು ಈ ಸಾಮ್ರಾಜ್ಯಕ್ಕೆ ಭೇಟಿ ನೀಡಿ ಇದರ ವೈಭವವನ್ನು ಹಾಡಿ ಹೊಗಳಿದ್ದಾರೆ. ಇಲ್ಲಿನ ಅನೇಕ ಸಂಗತಿಗಳನ್ನು ತಮ್ಮದೇ ಆದ ಸಾಹಿತ್ಯದಲ್ಲಿ ದಾಖಲಿಸಿದ್ದಾರೆ. ಅಲ್ಲದೇ, ದೇಶೀಯ ಸಾಹಿತ್ಯ ಮತ್ತು ಶಾಸನಗಳು ಸಹ ಆ ಕುರಿತು ಮಹತ್ವದ ಮಾಹಿತಿಗಳನ್ನು ನೀಡುತ್ತವೆ. ವಿಜಯನಗರದ ಪ್ರಬಲ ಹಾಗೂ ಶ್ರೇಷ್ಠ ದೊರೆ ಶ್ರೀಕೃಷ್ಣದೇವರಾಯ. ಈತನ ಕಾಲವು ವಿಜಯನಗರದಲ್ಲಿ ಅತ್ಯಂತ ವೈಭವದ ಕಾಲವಾಗಿತ್ತು. ಇದೊಂದು ಸುವರ್ಣಯುಗವೆಂದು ಹಲವು ವಿದ್ವಾಂಸರ ಅಭಿಮತ. ಕೃಷ್ಣದೇವರಾಯನನ್ನು ಕುರಿತ ಪ್ರಸ್ತುತ ಕೃತಿಯು ಆತನ ಕಾಲದ ಮಹತ್ವದ ಸಂಗತಿಗಳನ್ನು ಕುರಿತು ನಡೆಸಿರುವ ಒಟ್ಟು 50 ಸಂಶೋಧನ ಲೇಖನಗಳಿವೆ. ಅವುಗಳಲ್ಲಿ ಕೆಲವು : ತುಳುವಂಶ, ತುಳುವಂಶದ ಮೂಲದ ವಿಚಾರ, ವಿಜಯನಗರದ ಕೃಷ್ಣದೇವರಾಯನ ಕಾಲ, ಕೃಷ್ಣದೇವರಾಯನ ಪಟ್ಟಾಭಿಷೇಕ ಮತ್ತು ಆಡಳಿತದ ಗುರಿ, ಹಂಪೆಯ ಕೃಷ್ಣದೇವರಾಯನ ಅಪೂರ್ವ ವಿಗ್ರಹ, ತಿರುಪತಿಯಲ್ಲಿರುವ ಕೃಷ್ಣದೇವರಾಯ ಮತ್ತು ಅವನ ರಾಣಿಯರ ವಿಗ್ರಹಗಳು, ಕೃಷ್ಣದೇವರಾಯನ ತಾಯಿ ನಾಗಲಾದೇವಿ ಚಾರಿತ್ರಿಕ ಹಿನ್ನೋಟ, ಕೃಷ್ಣದೇವರಾಯ ಮತ್ತು ಕಳಿಂಗರಾಜ ಪುತ್ರಿ, ಕೃಷ್ಣದೇವರಾಯನ ಕಾಲದಲ್ಲಿ ಪಾಂಡಿಚೇರಿಯಲ್ಲಿ ನಿರ್ಮಾಣವಾದ ಒಂದು ಕೊಳ, ಕೃಷ್ಣದೇವರಾಯನ ಇನ್ನೊಂದು ಹೊಸ ಶಾಸನ, ಅತ್ತಿವಟ್ಟಿಯ ಅಪ್ರಕಟಿತ ಶಾಸನ - ಹಂಪೆಯ ಬಾಲಕೃಷ್ಣ, ಕೃಷ್ಣದೇವರಾಯನ ಹಂಪಿ ಶಾಸನಗಳು, ಕವಿ ಕೃಷ್ಣದೇವರಾಯ, ವಿಜಯನಗರ ಸಂಸ್ಕೃತಿಯ ಆಕರಗ್ರಂಥ ಸಾಮ್ರಾಜ್ಯಲಕ್ಷ್ಮಿ ಪೀಠಿಕಾ, ಶ್ರೀಕೃಷ್ಣದೇವರಾಯನ ದಿನಚರಿ - ಆಯುಕ್ತಮಾಲ್ಯದ, ಕೃಷ್ಣದೇವರಾಯನ ದಿನಚರಿ ಹಾಗೂ ರಾಯವಾಚಕಮು ಒಂದು ಟಿಪ್ಪಣಿ, ವಿಜಯನಗರದ ಅರಸರು ಮತ್ತು ವ್ಯಾಸರಾಜರು, ವಿಜಯನಗರ ಮತ್ತು ಒರಿಸ್ಸಾ ಸಂಬಂಧ, ಕೃಷ್ಣದೇವರಾಯನ ತೀರ್ಥಯಾತ್ರೆಗಳು, ಕೃಷ್ಣದೇವರಾಯನ ಕಾಲದ ಕ್ರೈಸ್ತ ಮಿಷನರಿಗಳು, ಹೀಗೆ ವಿವಿಧ ಲೇಖನಗಳು ಈ ಸಂಪುಟದಲ್ಲಿವೆ.
©2024 Book Brahma Private Limited.