ಲೇಖಕ ಡಾ. ಅಶ್ವತ್ಥ ನಾರಾಯಣ ಅವರ ‘ಕರ್ನಾಟಕದಲ್ಲಿ ಸ್ವಾತಂತ್ಯ್ರ ಹೋರಾಟ’ ಒಂದು ಅವಲೋಕನ ಕೃತಿಯು ವಿಮರ್ಶಾತ್ಮಕ ಬರವಣಿಗೆಗಳನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ಏರ್ಪಟ್ಟ ವಸಾಹತುಶಾಹಿ ವಿರೋಧಿ ಹೋರಾಟಗಳನ್ನು ನೇರವಾಗಿ ಮತ್ತು ಸರಳವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆರಂಭದ ಹೋರಾಟಗಳು, ಸಶಸ್ತ್ರ ಬಂಡಾಯಗಳು, ಕರ್ನಾಟಕದಲ್ಲಿ ಪ್ರಥಮ ಸ್ವಾತಂತ್ಯ್ರ ಸಂಗ್ರಾಮದ ಪ್ರತಿಧ್ವನಿ, ಸಂಘಟಿತ ಸ್ವಾತಂತ್ಯ್ರ ಹೋರಾಟ ಹಾಗೂ ಪರಾಮರ್ಶನ ಗ್ರಂಥಗಳು ಮತ್ತು ಲೇಖನಗಳನ್ನು ಒಳಗೊಂಡಿದೆ. ಉಳ್ಳಾಲದ ಚೌಟ ಮನೆತನದ ರಾಣಿ ಅಬ್ಬಕ್ಕ ದೇವಿಯು ಪೋರ್ಚುಗೀಸರ ವಿರುದ್ಧ ನಡೆಸಿದ ಹೋರಾಟದಿಂದ ಕೃತಿಯು ಆರಂಭವಾಗುತ್ತದೆ. ಯೂರೋಪಿಯನ್ನರನ್ನು ಸೋಲಿಸಿದ ಮೊದಲ ವ್ಯಕ್ತಿ ಒಬ್ಬ ಹೆಣ್ಣು ಮಗಳು ಮತ್ತು ಆಕೆ ಕನ್ನಡ ಮಣ್ಣಿನವಳು ಎಂಬುದು ಹೆಮ್ಮೆ ವಿಚಾರ. ಹೀಗೆ ರಾಣಿ ಅಬ್ಬಕ್ಕನಿಂದ ಆರಂಭವಾಗುವ ವಸಾಹತುಶಾಹಿ ವಿರೋಧಿ ಹೋರಾಟವು 1947 ರಲ್ಲಿ ಭಾರತ ಸ್ವತಂತ್ರಗೊಳ್ಳುವ ಮೂಲಕ ಕೊನೆಗೊಳ್ಳುತ್ತದೆ. ಒಟ್ಟಾರೆ, ಈ ಕೃತಿಯು ಕರ್ನಾಟಕದಲ್ಲಿನ ಸ್ವಾತಂತ್ಯ್ರ ಹೋರಾಟದ ಸ್ಥೂಲ ಚಿತ್ರಣವನ್ನು ಕಟ್ಟಿಕೊಡುತ್ತದೆ.
ಲೇಖಕ ಅಶ್ವತ್ಥನಾರಾಯಣ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ. ಎ, ಎಂ.ಫಿಲ್ ಮತ್ತು ಪಿ.ಎಚ್.ಡಿ ಪದವೀಧರರು. ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. 2013-14 ರಲ್ಲಿ 7ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿ, 2016ರಲ್ಲಿ 8,9, 10ಣೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯ ಸದಸ್ಯರಾಗಿದ್ದರು. ವಸಾಹತುಶಾಹಿ ಕಾಲಘಟ್ಟದ ಚರಿತ್ರೆ ಅಧ್ಯಯನ ಇವರ ವಿಶೇಷ ಆಸಕ್ತಿಯ ಕ್ಷೇತ್ರವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಅನೇಕ ಗೋಷ್ಠಿಯಲ್ಲಿ ತಮ್ಮ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿರುತ್ತಾರೆ. ಕೃತಿಗಳು: ‘ಕರ್ನಾಟಕದಲ್ಲಿ ಸ್ವಾತಂತ್ಯ್ರ ಹೋರಾಟ’ ಒಂದು ಅವಲೋಕನ ...
READ MORE