‘ಸೋಮನಾಥಪುರ’ ಸಂಶೋಧಕ ಷ. ಶೆಟ್ಟರ್ ಅವರ ಕೃತಿ. ಪ್ರೌಢ ಓದುಗ ಅಥವಾ ಸಂದರ್ಶಕ ಸೋಮನಾಥಪುರದ ಬಗ್ಗೆ ತಿಳಿದುಕೊಳ್ಳಲು ಬೇಕಾದ ಮಾಹಿತಿ ಒದಗಿಸುವುದು ಈ ಗ್ರಂಥದ ಉದ್ದೇಶ.
ಹೊಯ್ಸಳರ ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಪ್ರಾರಂಭವಾಗಿ ಇಲ್ಲಿಯ ದೇವಾಲಯಗಳ ಇತಿಹಾಸ, ಐತಿಹ್ಯ, ಪೋಷಕ, ವಾಸ್ತು-ಶಿಲ್ಪಿ ಇತ್ಯಾದಿ ಚರ್ಚಿಸುತ್ತಾ, ವಾಸ್ತು, ಶಿಲ್ಪ, ಅರ್ಚನೆ, ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವೊಂದನ್ನು ಒದಗಿಸಿಕೊಡಲಾಗಿದೆ.
ಪ್ರಧಾನ ದೇವತೆಗಳ ಪಾಕಶಾಲೆ, ವಸ್ತ್ರಾಭರಣ ಭಂಡಾರ ಮತ್ತು ಮನರಂಜಕ ಬಳಗಗಳ ಬಗ್ಗೆ ಒಳನೋಟಗಳನ್ನು ಕೊಡಲಾಗಿದೆ. ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಕಟ್ಟಿದ ಅತ್ಯಂತ ಸುಂದರ ದೇವಾಲಯಗಳಲ್ಲಿ ಕೊನೆಯದೂ ಅಳಿದುಳಿದ ಈ ಶೈಲಿಯ ವಿಷ್ಣು ತ್ರಿಕೂಟಗಳಲ್ಲಿ ಅದ್ಭುತವಾದದೂ ಎಂಬ ಹಿರಿಮೆ ಕೇಶವ ದೇವಾಲಯದ್ದು. ವಾಸ್ತು ಶಿಲ್ಪಿಗಳ ಬಗ್ಗೆ ಈ ದೇವಾಲಯ ಒದಗಿಸುವ ವಿವರಗಳನ್ನು ಸರಿಗಟ್ಟುವ ಮಾಹಿತಿ ನಮ್ಮ ದೇಶದ ಮಧ್ಯಕಾಲೀನ ದೇವಾಲಯಗಳಲ್ಲೆಲ್ಲೂ ಕಾಣಸಿಗುವುದಿಲ್ಲ. ಐದು ಬಗೆಯಲ್ಲಿ ಅಕ್ಷರ ಸಂಯೋಜನೆ ಮಾಡಿ ಅರವತ್ತಕ್ಕಿಂತ ಹೆಚ್ಚು ಬಾರಿ ಸಹಿ ಮಾಡಿರುವ ಕೇಶವ ದೇವಾಲಯದ ಶಿಲ್ಪಿಯೊಬ್ಬ ಭಾರತೀಯ ಕಲಾ ಇತಿಹಾಸದಲ್ಲಿ ದಾಖಲೆಯೊಂದನ್ನು ನಿರ್ಮಿಸಿ, ಆ ಮೂಲಕ ತನ್ನ ಹೆಸರನ್ನು ಚಿರಸ್ಥಾಯಿ ಮಾಡಿಕೊಂಡಿರುವನು. ಇದರ ಪರಿಣಾಮ ಅಲ್ಪಮಟ್ಟಿನದಲ್ಲ. ಏಕೆಂದರೆ ಭಾರತೀಯ ಕಲೆ ಅನಾಮಧೇಯ ಮತ್ತು ಭಾರತೀಯ ಶಿಲ್ಪಿಗಳಿಗೆ ವೈಯಕ್ತಿಕತೆಯನ್ನು ಪ್ರತಿಪಾದಿಸಿಕೊಳ್ಳುವುದರ ಬಗ್ಗೆ ಅನಾಸಕ್ತಿ ಎಂಬ ವ್ಯಾಪಕ ನಂಬಿಕೆಯನ್ನು ಇದು ಅಲ್ಲಗೆಳೆಯುವುದು.
ಇಷ್ಟೇ ಕುತೂಹಲಕರವಾದ ಮತ್ತೊಂದು ವಿಶೇಷತೆ ಈ ಅಗ್ರಹಾರದ ಸಂಸ್ಥಾಪಕನು ತಾನು ಶೂದ್ರನೆಂದು ಸ್ಪಷ್ಟವಾಗಿ ಸಾರಿಕೊಂಡಿರುವುದು. ಸಂಸ್ಕೃತ ಶಬ್ದ ಸಂಪದವನ್ನು ಸಮರ್ಥವಾಗಿ ಬಳಸಿಕೊಂಡು ಸೂಕ್ಷ್ಮ ತೆರೆಯನ್ನೆಳೆಯಲು ಈ ಶೂದ್ರನನ್ನು ಬ್ರಹ್ಮಪಾದಪುತ್ರನೆಂದು ಚತುರ ಕವಿಯೊಬ್ಬ ಬಣ್ಣಿಸಿರುವುದು ಮತ್ತೊಂದು ವಿಶೇಷ.
ಎಂಬತ್ತೆರಡು ಸುಂದರ ವರ್ಣಚಿತ್ರ ಮತ್ತು ಬಾಹ್ಯಾಕಾಶ ನೌಕೆಗಳಿಂದ ಪಡೆದ ಅಪೂರ್ವ ದೃಶ್ಯಗಳ ಸಹಾಯದಿಂದ ಸೋಮನಾಥಪುರದ ಗತ ಇತಿಹಾಸವನ್ನು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ತೆರೆದಿಟ್ಟಿರುವುದು ಇಲ್ಲಿಯ ವಿಶೇಷತೆ.
©2025 Book Brahma Private Limited.