ಲೇಖಕ ಸಾ. ಶಿ. ಮರುಳಯ್ಯ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯʼ. ಪುಸ್ತಕವು ಕರ್ನಾಟಕದ ಇತಿಹಾಸದಲ್ಲಿ ಕಂಡುಬರುವ ಪ್ರಭಾವೀ ಸಂಸ್ಥಾನ ಕೆಳದಿ ನಾಡು, ಅದನ್ನು ಆಳಿದ ರಾಜರು ಹಾಗೂ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಗಳ ಕುರಿತು ಹೇಳುತ್ತದೆ. ಕೆಳದಿಯು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಒಂದು ಗ್ರಾಮವಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಇದು ಸಾಂತರಸರ ಅಧೀನದಲ್ಲಿತ್ತು. ಇಲ್ಲೇ ಹುಟ್ಟಿ ಬೆಳೆದ ಸಾಮಾನ್ಯ ಮನೆತನಕ್ಕೆ ಸೇರಿದ ಚೌಡಗೌಡನೆಂಬ ರೈತನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಅರಸನು ಎಂಟು ಮಾಗಣೆಗಳ ನಾಯಕತ್ವವನ್ನು ಕೊಟ್ಟು ನಾಯಕನಾಗಿ ಮಾಡಿದಾಗಿನಿಂದ ಆ ಊರಿನ ನೋಟವೇ ಬದಲಾಯಿತು. ಅಲ್ಲಿ ಬಹುಬೇಗನೆ ಅಭಿವೃದ್ದಿ ಕಾರ್ಯಗಳು ನಡೆುದವು. ರಾಜಧಾನಿ, ಅರಮನೆ, ಕೋಟೆ, ರಾಮೇಶ್ವರ ದೇವಸ್ಥಾನ ಹೀಗೆ ಆ ಊರು ನಾಯಕರ ಆಳ್ವಿಕೆ ಇರುವವರೆಗೂ ರಾಜ್ಯದ ಪ್ರಮುಖ ನಗರವಾಗಿ ಇತಿಹಾಸದಲ್ಲಿ ಅಚ್ಚೊತ್ತಿದೆ. ಶಿವಪ್ಪನಾಯಕನ ಅರಮನೆ, ವೀರಭದ್ರ ದೇವಾಲಯ, ನೀಲಕಂಠೇಶ್ವರ ದೇವಾಲಯ ಇವೆಲ್ಲವೂ ಇವರ ಕಾಲದ ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಇಮ್ಮಡಿ ಬಸವಪ್ಪ ನಾಯಕನ ಕಾಲದವರೆಗೂ ಕೆಳದಿಯ ಆಳ್ವಿಕೆ ಉತ್ತಮವಾಗಿತ್ತು, ಅನಂತರದಲ್ಲಿ ಬಂದ ರಾಜರ ಆಡಳಿತ ಸುಗಮವಾಗಿರದೆ ಹೈದರಾಲಿಯ ಆಕ್ರಮಣಕ್ಕೆ ನೆಲಕಚ್ಚಿ ಹೋಯಿತು.
©2024 Book Brahma Private Limited.