‘ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು’ ಕೃತಿಯು ಶೋಭಾ ಟಿ. ತಪಶಿ ಅವರ ಸಂಶೋಧನಾ ಗ್ರಂಥವಾಗಿದೆ. ಈ ಸಂಶೋಧನಾ ಮಹಾಪ್ರಬಂಧದಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಕೃತಿಗೆ ಮುನ್ನುಡಿ ಬರೆದಿರುವ ಧನವಂತ ಹಾಜವಗೋಳ ಅವರು, ‘ಮೊದಲ ಅಧ್ಯಾಯ ಅಧ್ಯಯನದ ಉದ್ದೇಶ, ಸ್ವರೂಪ ವ್ಯಾಪ್ತಿ ಒಳಗೊಂಡಿದ್ದು, ಇದರಲ್ಲಿ ಈ ತಲೆಬರಹವನ್ನಿಟ್ಟುಕೊಂಡು ಅಧ್ಯಯನ ಮಾಡುವ ಅನಿವಾರ್ಯತೆಯನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮಹಾಪ್ರಬಂಧವನ್ನು ಸಿದ್ಧಗೊಳಿಸಲು ಹಲವು ಉದ್ದೇಶಗಳನ್ನು ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ ಸ್ಥಳನಾಮಗಳಿಗೆ ಸಂಬಂಧಿಸಿದ ಸಾಹಿತ್ಯಾವಲೋಕನವನ್ನು ಮಾಡಲಾಗಿದೆ. ಅಲ್ಲದೆ, ಈ ಜಿಲ್ಲೆಯನ್ನು ಹೊರತುಪಡಿಸಿ ರಚನೆಯಾದ ಸ್ಥಳನಾಮಗಳಿಗೆ ಸಂಬಂಧಿಸಿದ ಗ್ರಂಥಗಳನ್ನೂ ಅವಲೋಕನ ಮಾಡಿದ್ದಾರೆ. ಈ ಅಧ್ಯಯನ ಸ್ವರೂಪದಲ್ಲಿ ಕ್ಷೇತ್ರಕಾರ್ಯ ಮಾಡಿ ಮಾಹಿತಿಯನ್ನು ಸಂಗ್ರಹಿಸಿದ ವಿವರಗಳನ್ನು ಕೊಟ್ಟಿದ್ದಾರೆ. ಅದರೊಂದಿಗೆ ಉಪಲಬ್ದವಾದ ಗ್ರಂಥಗಳು, ಶಾಸನಗಳು, ಪತ್ರಿಕೆಯಲ್ಲಿ ಪ್ರಕಟವಾದ ಬಿಡಿ ಲೇಖನಗಳು ಹಾಗೂ ಸ್ಥಳನಾಮಗಳಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿಗಳ ದಾಖಲಾತಿಗಳನ್ನು ಈ ಪ್ರಬಂಧ ರಚನೆಗೆ ಆಕರವಾಗಿ ಬಳಸಿಕೊಂಡಿರುವುದು ಅವರ ಕ್ಷೇತ್ರಕಾರ್ಯದ ಪರಿಶ್ರಮ ಕಾಣುತ್ತದೆ. ಇಲ್ಲಿಯ ಅಧ್ಯಾಯಗಳ ವಿಂಗಡನೆ ಆಯಾ ಅಧ್ಯಾಯಗಳು ಒಳಗೊಂಡ ವಿಷಯ ವಿವರಣೆಯನ್ನು ಸ್ಪಷ್ಟಪಡಿಸಿದ್ದಾರೆ. ಇದು ಬೆಳಗಾವಿ ಜಿಲ್ಲೆಯ ಸ್ಥಳನಾಮಗಳ ಅಧ್ಯಯನವಾದ್ದರಿಂದ ಈ ಜಿಲ್ಲೆಯ ವ್ಯಾಪ್ತಿಯನ್ನು ನಿಗದಿಪಡಿಸಿಕೊಂಡು ಅಧ್ಯಯನ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಶೋಭಾ ಟಿ. ತಪಶಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದವರು. ಕೃಷಿ ಕುಟುಂಬದವರು. ಕನ್ನಡ ಎಂ.ಎ ಪದವೀಧರರು. ‘ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು’ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು. ಪ್ರಸ್ತುತ ಹಾವೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕೃತಿಗಳು ; ಬೆಳಗಾವಿ ಜಿಲ್ಲೆಯ ಸ್ಥಳನಾಮಗಳು ...
READ MORE