‘ಜಾನಪದ ಸಂವೇದನೆ’ ಲೇಖಕ,ಜಾನಪದ ತಜ್ಞ ಡಾ.ಕುರುವ ಬಸವರಾಜ ಅವರ ಜಾನಪದ ಕುರಿತ ಲೇಖನಗಳ ಸಂಕಲನ. ಈ ಕೃತಿಗೆ ಬಸವರಾಜ ಕಲ್ಗುಡಿ ಮುನ್ನುಡಿ ಬರೆದಿದ್ದಾರೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಕುರುವ ಬಸವರಾಜ್ ಅವರು ನಮ್ಮ ನಡುವಿನ ಸಂವೇದನಶೀಲ ವ್ಯಕ್ತಿ. ರಾಮನಗರದ ಜಾನಪದ ಲೋಕದಲ್ಲಿ ಸಂಪೂರ್ಣವಾಗಿ ಜಾನಪದ ಸಂವೇದನೆಯ ತಮ್ಮ ವ್ಯಕ್ತಿತ್ವವನ್ನು ಗಂಧದ ಹಾಗೆ ತೆಯ್ದು ಕೊಂಡವರು. ಮೂವತಃ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾದ ಬಸವರಾಜ್ ಅವರು ತಮ್ಮ ಜಾನಪದ ಸಂವೇದನೆಯ ಮೂಲಕವೇ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಪರಿಣಾಮಕಾರಿಯಾದ ಕೆಲಸವನ್ನು ಮಾಡಿದ್ದಾರೆ. ಸಣ್ಣಕಥೆ, ಕಾವ್ಯ, ನಾಟಕ, ಸಾಕ್ಷ್ಯಚಿತ್ರಗಳು, ಅನೇಕ ಕೃತಿಗಳ ಸಂಪಾದನೆ, ಹೀಗೆ ಹತ್ತು ಹಲವು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಪ್ರಕಟಗೊಳಿಸುತ್ತ ಬಂದ ಬಸವರಾಜ್ ಕನ್ನಡಿಗರಿಗೆ ಪರಿಚಿತರು’ ಎಂದಿದ್ದಾರೆ. ಜೊತೆಗೆ ಬಸವರಾಜ್ ಅವರು ಜನಪದ ಸಂಗೀತ ಎನ್ನುವ ಬಹುಮುಖ್ಯವಾದ ಈ ಪುಸ್ತಕದ ಭಾಗದಲ್ಲಿ ಆಧುನಿಕ ಶ್ರೇಣೀಕರಣ ಮಾದರಿಯ ವ್ಯಾಖ್ಯಾನಗಳನ್ನು ಸೂಕ್ಷ್ಮವಾಗಿ ತಿರಸ್ಕರಿಸಿದ್ದಾರೆ. ಈ ದೃಷ್ಟಿಯಿಂದ ಇವರ ಬಹುನಾದ ವಿನ್ಯಾಸದ ತಮಟೆ ಎಂಬ ವಾದ್ಯದ ಸುತ್ತ ಎನ್ನುವ ಲೇಖನ ಬಹುಮುಖ್ಯವಾಗಿದೆ. ಪ್ರದರ್ಶನ ಕಲೆಗಳನ್ನು ಕುರಿತ ಇ್ನೊಂದು ಭಾಗದ ಇವರ ಮೂರು ಲೇಖನಗಳು ಬಹಳ ಮುಖ್ಯವಾದವು ಎಂದು ನಾನು ಅಂದುಕೊಂಡಿದ್ದೇನೆ, ಏಕೆಂದರೆ ಜನಪದ ಕಲಾ ಸಂಸ್ಕೃತಿಯಲ್ಲಿ ಅಭಿನಯ, ನಾಟಕೀಕರಣ, ಸಂಗೀತ, ಹಾವ, ಭಾವ ಮತ್ತು ಭಾವನೆಗಳಿಗೆ ಇರುವ ಅಂತರ್ ಸಂಬಂಧವು ಬಹುಮುಖ್ಯ ಎನ್ನುವುದನ್ನು ಈ ಬರವಣಿಗೆಗಳು ಸೂಚಿಸುತ್ತವೆ ಎಂದಿದ್ದಾರೆ. ಹಾಗೇ ಕುರುವ ಅವರ ಜಾನಪದ ಸಂವೇದನೆ ಎನ್ನುವ ಈ ಕೃತಿಯು ಜನಪದ ಕಲೆಯ ವ್ಯಾಖ್ಯಾನವನ್ನು ಕುರಿತಂತೆ ಹೊಸ ತಿಳುವಳಿಕೆಯನ್ನು ಮೂಡಿಸುವಲ್ಲಿ ಬಹುಪಾಲು ಯಶಸ್ವಿಯಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.