ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು- ಕೃತಿಯನ್ನು ಲೇಖಕಿ ಡಾ. ಎ.ಎನ್. ಸಿದ್ದೇಶ್ವರಿ ಅವರು ರಚಿಸಿದ್ದಾರೆ. ಕ್ಷೇತ್ರ ಕಾರ್ಯ ಆಧರಿತ, ಸಮಗ್ರ ಮಾಹಿತಿ ಸಂಗ್ರಹಣೆ-ವಿಶ್ಲೇಷಣೆಯ ಕೃತಿ. ಅಧ್ಯಯನದ ಅನುಕೂಲಕ್ಕಾಗಿ ಐದು ಅಧ್ಯಾಯವಾಗಿ ವಿಷಯವನ್ನು ವಿಶ್ಲೇಷಿಸಲಾಗಿದೆ.
ಅಧ್ಯಯನದ ಉದ್ದೇಶ, ವ್ಯಾಪ್ತಿ, ಸ್ವರೂಪ ಇತ್ಯಾದಿ, ಬಳ್ಳಾರಿ ಜಿಲ್ಲೆಯ ಜನಪದ ಆಚರಣೆಗಳು (ಉಗಮ, ವಿಕಾಸ, ನಂಬಿಕೆ, ಸ್ವರೂಪ, ಕಾಲ ಇತ್ಯಾದಿ, ಪ್ರಕೃತಿ ಸಮಬಂಧಿ ಆಚರಣೆಗಳು (ನೆಲ, ಕುಂಭೋತ್ಸವ,ಗುಡಿ ಹುಣ್ಣಿಮೆ, ಜಲ ಸಂಬಂಧಿ ಆಚರಣೆಗಳು, ಮಳೆ ಬೀಜ ತರುವುದು, ಕಪ್ಪೆ-ಕತ್ತೆಗಳ ಮದುವೆ ಇತ್ಯಾದಿ), ಅಗ್ನಿ ಸಂಬಂಧಿ ಆಚರಣೆಗಳು, ಕೆಂಡ ತೂರುವ ಆಚರಣೆ, ಮೊಹರಂ ಆಚರಣೆ ಇತ್ಯಾದಿ, ಸಂಕ್ರಾಂತಿ, ಬೆದರುಗೊಂಬೆ, ಚೆರಗ ಚೆಲ್ಲುವುದು ಹೀಗೆ ಜೀವ ಸಂಬಂಧಿ ಆಚರಣೆಗಳು, ಸಿಡಿ ಬಂಡಿ ರಥೋತ್ಸವ, ಪ್ರಾಣಿ ಬಲಿ, ಬಾಳೆ ದಿಂಡಿನ ಹರಕೆ, ಮಹಾಸತೊ ವೀರನಾಮ್ಮ ಹೀಗೆ ಬಲಿ ಆಚರಣೆಗಳು ಹೀಗೆ ಶಾಸ್ತ್ರೀಯವಾಗಿ ವಿಷಯವನ್ನು ವಿಭಾಗಿಸಿ ಸಂಶೋಧನೆಯ ನೆಲೆಯಲ್ಲಿ ಸಂಪಾದಿಸಿದ ಕೃತಿ ಇದು.
ಜನಪದ ಅಪಾರ ವ್ಯಾಪ್ತಿ ಉಳ್ಳದ್ದು. ಮನುಷ್ಯನ ವಿಕಾಸದ ಪ್ರಾರಂಭಿಕ ಹಂತದಿಂದಲೂ ಜಾನಪದದ ನೆಲೆಗಳು ಪ್ರಭಾವಿಸಿರುವುದು ಕಾಣಬಹುದಾಗಿದೆ. ಜನಪದರ ಬದುಕಿನ ಸ್ಥಿತ್ಯಂತರಗಳನ್ನು ತನ್ನಂತರಂಗದಲ್ಲಿ ಗರ್ಭಿಕರಿಸಿಕೊಂಡಿರುವ ಜಾನಪದ ಅಧ್ಯಯನ ಮಾನವ ಸಮಸ್ತ ಮುಖಗಳ ಅಧ್ಯಯನವೇ ಇದೆ. ಇತಿಹಾಸ, ಮನೋವಿಜ್ಞಾನ, ವಿಜ್ಞಾನ, ಸಮಾಜಶಾಸ್ತ್ರ ಹೀಗೆ ಬಹುಶಿಸ್ತೀಯ ನೆಲೆಯಲ್ಲಿ ಜಾನಪದದ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಬಹುಮುಖ ನೆಲೆಯ ಜಾನಪದವನ್ನು ಪ್ರಾದೇಶಿಕವಾಗಿ ಅಧ್ಯಯನ ಮಾಡುವುದು ಹೆಚ್ಚು ಸೂಕ್ತವಾಗಿದೆ. ಶ್ರೀಮತಿ ಎ.ಎನ್. ಸಿದ್ದೇಶ್ವರಿ ಅವರ "ಬಳ್ಳಾರಿ ಜಿಲ್ಲೆಯ ಜನಪದ ಆಚರಣೆಗಳು” ಮಹಾಪ್ರಬಂಧವು ಅಪಾರ ಮಾಹಿತಿಯ ಸಂಗ್ರಹಣೆ, ಸಂಗ್ರಹಿತ ಮಾಹಿತಿಗಳ ವಿಶ್ಲೇಷಣೆ, ಅರ್ಥಪೂರ್ಣವಾದ ವಾಕ್ಯರಚನೆ, ಸಂಶೋಧನೆಗೆ ಅಗತ್ಯ ಭಾಷೆಯ ಬಳಕೆ ಇವುಗಳಿಂದಾಗಿ ಪ್ರೌಢವಾಗಿದೆ.
-ಪ್ರೊ. ಸಣ್ಣರಾಮ ಕುವೆಂಪು ವಿ.ವಿ.. ಶಿವಮೊಗ್ಗ
ಜನಪದ ಗೀತೆ, ಕಥೆ, ಗಾದೆ, ಒಗಟು, ಒಡಪು, ನಂಬಿಕೆ, ಸಂಪ್ರದಾಯ ಆಚರಣೆಗಳ ಕುರಿತು ಪ್ರಾದೇಶಿಕವಾದ ಅನೇಕ ಸಂಶೋಧನೆಗಳು ಕನ್ನಡದಲ್ಲಿ ನಡೆದಿವೆ. ಅಂತಹ ಅಧ್ಯಯನಗಳ ಮುಂದುವರಿಕೆಯಾಗಿ ಎ.ಎನ್. ಸಿದ್ದೇಶ್ವರಿ ಅವರು ಪ್ರಸ್ತುತ ಬಳ್ಳಾರಿ ಜಿಲ್ಲೆಯ ಜನಪದ ಆಚರಣೆಗಳ ಅಧ್ಯಯನ ನಡೆಸಿ, ಸಮಗ್ರ ಸ್ವರೂಪವನ್ನು ವಿಶ್ಲೇಷಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ಯಾಂತ್ರಿಕ ಯುಗದಲ್ಲಿ ನಾಗರಿಕತೆಯ ಅವಾಂತರದಲ್ಲಿ ಅನೇಕ ಸಮಾಜಮುಖಿಯಾದ ಆಚರಣೆಗಳು ಶಾಶ್ವತವಾಗಿ ಕಣ್ಮರೆಯಾಗುವ ಸ್ಥಿತಿ ತಲುಪಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಆಚರಣೆಗಳನ್ನು ಉಳಿಸಿಕೊಳ್ಳುವ ಬಗೆ ಹೇಗೆ? ಎಂಬುದರ ಕುರಿತು ತಮ್ಮ ಚಿಂತನೆಯನ್ನು ಹರಿಸಿದ್ದಾರೆ. ಜಾನಪದ ಕ್ಷೇತ್ರಕ್ಕೆ ಈ ಕೃತಿಯು ಉತ್ತಮ ಕೊಡುಗೆಯಾಗಿದೆ.
ಡಾ. ನಿಜಲಿಂಗಪ್ಪ ಮಟ್ಟಿಹಾಳ, ಕ.ವಿ.ವಿ. ಧಾರವಾಡ.
(ಕೃತಿಗೆ ಬರೆದ ಬೆನ್ನುಡಿಯಲ್ಲಿ)
©2024 Book Brahma Private Limited.