ಲೇಖಕ ಹನುಮಂತರಾವ್ ಬಿ. ದೊಡ್ಡಮನಿ ಅವರ ಕೃತಿ-ಜಾನಪದ ಜೀವನ ಮೌಲ್ಯ. ಹತ್ತು ಪ್ರಮುಖ ಲೇಖನಗಳನ್ನು ಒಳಗೊಂಡಿದೆ. ಹಲಸಂಗಿ ಗೆಳೆಯರ ಗುಂಪಿನಿಂದ ಮಧುರ ಚೆನ್ನ, ಪಿ.ಧೂಲಾ, ಸಿಂಪಿಲಿಂಗಣ್ಣನವರ ಸಂಪಾದನೆಯ ಗರತಿಯ ಹಾಡು, ಮಲ್ಲಿಗೆ ದಂಡೆ ತನ್ನದೇ ಯಾದ ಅನನ್ಯತೆ ಹೊಂದಿವೆ ಎಂಬುದನ್ನು ಗುರುತಿಸಿದ್ದಾರೆ. ಕಥೆ, ಹಾಡು, ಒಡಪು, ಒಡಬು, ಗಾದೆಗಳು, ಕುಣಿತಗಳು, ಬಯಲಾಟ, ಲಾವಣಿ, ಕರಡಿಮಜಲು, ಚೌಡಿಕೆ,ಪೋತುರಾಜ, ನಂದಿಧ್ವಜ, ಭಜನೆ ಹಲವಾರು ಕುಣಿತಗಳು ಸಹ ಇಲ್ಲಿ ದಾಖಲಿಸಿದ್ದಾರೆ. ವಡ್ಡಾರಾಧನೆಯ ಜನಪದ ಭಾಷೆ, ಜೈನಧರ್ಮ ಕುರಿತು ಕಥೆಗಳನ್ನೂ ವಿವರಿಸಿದ್ದಾರೆ.
ಹೆಂಗಸರ-ಗಂಡಸರ-ಮಕ್ಕಳ ಹಾಡೆಂದು ವಿಭಜಿಸಿ, ಪರಿವರ್ತನೆಯನ್ನು ವಿಶ್ಲೇಷಿಸಿದ್ದಾರೆ. ಕಲೆಗಾಗಿ ಕಲೆ ಅಲ್ಲ ಬದುಕಿಗಾಗಿ ಕಲೆ ಎಂಬ ವಾಸ್ತವ ಸತ್ಯ ಹಿಡಿದಿಟ್ಟಿದ್ದಾರೆ. ಅಂಟಿಕೆ-ಪಂಟಿಕೆ, ಆಣಿ-ಪೀಣಿ, ಹೆಜ್ಜೆಕುಣಿತ, ಕರಬಲ ಹಾಡು, ಹರದೇಶಿ- ನಾಗೇಶಿ,ಬಯಲಾಟ, ಡೊಳ್ಳು ಹಲವಾರು ಕಲೆಗಳ ಪ್ರಾಮುಖ್ಯತೆ ತಿಳಿಸಿದ್ದಾರೆ. ಕೃತಿಗೆ ಡಾ.ಗವಿಸಿದ್ಧಪ್ಪ ಪಾಟೀಲರು ಮುನ್ನುಡಿ ಬರೆದಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಪತ್ರಕರ್ತ ವಾದಿರಾಜ್ ವ್ಯಾಸಮುದ್ರ ಅವರು ‘ಜಾನಪದ ಎಂಬುದು ಇಂದಿಗೂ ಗ್ರಾಮೀಣ ಜನರ ಕೈಗನ್ನಡಿಯಾಗಿದೆ. ಬದಲಾಗುತ್ತಿರುವ ಪ್ರಪಂಚದಲ್ಲಿ ಜಾನಪದವನ್ನು ಉಳಿಸಿ-ಬೆಳಸುವ ಕೆಲಸ ಕಡಿಮೆಯಾಗುತ್ತಿದೆ. ಮುಂದೊಂದು ದಿನ ಜಾನಪದ ಸಾಹಿತ್ಯ ಎಲ್ಲಿ ನಶಿಸಿ ಹೋಗುತ್ತದೆ ಎಂಬ ಭೀತಿಯೂ ಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ, ಹನುಮಂತರಾವ್ ದೊಡ್ಡಮನಿ ಅವರಂತಹ ಜನರು ಜಾನಪದ ಸಾಹಿತ್ಯವನ್ನು ತಮ್ಮದೇ ರೀತಿಯಲ್ಲಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.