ಲೇಖಕ ಡಾ ಶ್ರೀ ರಾಮ ಇಟ್ಟಣ್ಣವರ ಅವರ ಕೃತಿ-ʼಹಲಗಲಿ; ಗ್ರಾಮ ಜನಪದ. ಮುಧೋಳ ತಾಲೂಕಿನ ಹಲಗಲಿ ಗ್ರಾಮವನ್ನು ಇಲ್ಲಿ ಜಾನಪದ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಊರಿನ ಭೌಗೋಳಿಕ ಪರಿಸರ, ಈ ಊರಿಗೆ ಸಂಬಂಧಪಡುವ ಪುರಾಣ, ಐತಿಹ್ಯ, ಇತಿಹಾಸದ ಅಂಶಗಳು, ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ಸಂಪ್ರದಾಯ, ಆಚರಣೆಗಳು, ಕಲೆ, ವೈದ್ಯ, ಕ್ರೀಡೆ ಹೀಗೆ ಈ ಗ್ರಾಮದ ಸಮಸ್ತ ವಿಷಯವನ್ನು ಇಲ್ಲಿಯ ಅಧ್ಯಯನ ಒಳಗೊಂಡಿದೆ. ಗ್ರಂಥದ ಕೊನೆಯಲ್ಲಿ ಹಲಗಲಿಗೆ ಸಂಬಂಧಪಡುವ ಹಾಡುಗಳನ್ನೂ, ಪೋಟೋಗಳನ್ನು ಸಂಗ್ರಹಿಸಲಾಗಿದೆ. ಹಳ್ಳಿಯ ಚರಿತ್ರೆಗೆ ಮಾದರಿಯಾಗಿರುವ ಚಾರಿತ್ರಿಕ ಪುಸ್ತಕವಾಗಿದೆ. ಹಲವು ಐತಿಹ್ಯಗಳನ್ನು ಹೊಂದಿದ್ದರೂ ಆಂಗ್ಲರ ವಿರುದ್ಧ ಹೋರಾಡಿದ ಬೇಡರ ಬಂಡಾಯದಿಂದಾಗಿ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದೆ ಎನ್ನುವುದು ಈ ಕೃತಿಯ ಮೂಲ ಅಂಶವಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯಗಳಾಗಿದ್ದ ಗ್ರಾಮಗಳು ಆಧುನಿಕ ಕಾಲದಲ್ಲಿ ಬದಲಾಗುತ್ತಿವೆ. ಪರಿಣಾಮವಾಗಿ ಪ್ರಾಚೀನ ಸಂಪ್ರದಾಯಗಳು, ಸಾಮಾಜಿಕ ಮತ್ತು ಧಾರ್ಮಿಕ ವಿವಿಧ ಆಚರಣೆಗಳು ಐತಿಹಾಸಿಕ ಅವಶೇಷಗಳು ಮಾಯವಾಗುತ್ತಿವೆ. ಹಿರಿಯರು ಪರಿಪಾಲಿಸಿಕೊಂಡು ಬಂದಿರುವ ಆಚರಣೆಗಳು, ಸಂಪ್ರದಾಯಗಳು ಮತ್ತು ಐತಿಹಾಸಿಕ ಘಟನೆಗಳು ಈ ಕೃತಿಯಲ್ಲಿ ಅಡಕವಾಗಿವೆ. ಸಂಶೋಧನ ಅಧ್ಯಯನದ ರೀತಿಯಲ್ಲಿ ರೂಪುಗೊಂಡ ಈ ಕೃತಿಯು ನಮ್ಮ ದೇಶದ ಸಾವಿರ ಸಾವಿರ ಹಳ್ಳಿಗಳ ಚರಿತ್ರೆಯ ಬರವಣಿಗೆಯ ಮಾದರಿಯಾಗಿದೆ
©2024 Book Brahma Private Limited.