‘ಹೃದಯ ಸಂಪುಟ’ ಕೃತಿಯು ವಾಗೀಶ್ವರಿ ಶಾಸ್ತ್ರಿ ಅವರ ಸಂಪ್ರದಾಯ ಹಾಡುಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ’ಸಂಪ್ರದಾಯದ ಹಾಡುಗಳು ನನಗೆ ಹುಟ್ಟಿನಿಂದಲೇ ಅಂಟಿಕೊಂಡು ಬಂದವು‘ ಎಂದಿರುವ ಸಂಗ್ರಾಹಕಿ, ಸುಮಾರು 364 ಹಾಡುಗಳನ್ನು ಇಲ್ಲಿ ಕೊಟ್ಟಿದ್ದಾರೆ. ಜೊತೆಗೆ ಹಾಡನ್ನು ಹೇಳಿಕೊಟ್ಟವರ ಪರಿಚಯವನ್ನೂ ಇದರೊಂದಿಗೆ ನೀಡಲಾಗಿದೆ. ಈ ಸಂಪ್ರದಾಯದ ಹಾಡುಗಳಲ್ಲಿ `ಹೆಣ್ಣು ಮಗಳನ್ನು ಹಸೆಗೆ ಕರೆಯುವ ಹಾಡುಗಳು‘, `ಮದುವೆಯ ಹಾಡುಗಳು‘, `ಬೀಗರ ಹಾಡುಗಳು‘,`ತೊಟ್ಟಿಲು ಶಾಸ್ತ್ರದ ಹಾಡುಗಳು‘ ರೀತಿಯ ಹಾಡುಗಳು ಇರುವಂತೆಯೇ `ಮಕ್ಕಳ ಹಾಡುಗಳು‘, `ಕಥನ ಗೀತಗಳು‘ ರೀತಿಯ ಹಾಡುಗಳೂ ಇಲ್ಲಿವೆ. `ಸಂಪ್ರದಾಯದ ಹಾಡುಗಳನ್ನು ಹಾಡಿರುವುದು ಬಹುಪಾಲು ಮಹಿಳೆಯರೇ. ಹಾಡುಗಳ ಸಂಖ್ಯೆಗೆ ಲೆಕ್ಕವಿಲ್ಲ. ಅನೇಕ ಸಾವಿರವಾಗಬಹುದು. ಅವರು ರಾಮಾಯಣ, ಭಾರತ, ಭಾಗವತ, ಹದಿನೆಂಟು ಪುರಾಣಗಳು, ಜಾನಪದ ಗಾದೆ, ಒಗಟು, ಹಾಸ್ಯ, ಕಟಕಿ, ವಿಡಂಬನೆ ಎಲ್ಲವನ್ನೂ ಸಂಪ್ರದಾಯದ ಹಾಡುಗಳಿಗೆ ಅಳವಡಿಸಿ ಬಿಟ್ಟಿದ್ದಾರೆ. ಈ ಹಾಡುಗಳಲ್ಲಿ ಜನ ಜೀವನವೇ ಪ್ರತಿಬಿಂಬಿತವಾಗಿದೆ‘ ಎಂದಿದ್ದಾರೆ ಗೋರೂರು ರಾಮಸ್ವಾಮಿ ಅಯ್ಯಂಗಾರ್. ಅಂದಹಾಗೆ, 1985ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕವನ್ನು ವಿಸ್ತಾರವಾಗಿ ಪರಿಷ್ಕರಿಸಿ ಪ್ರಕಟಿಸಲಾಗಿದೆ.
©2024 Book Brahma Private Limited.