ಲೇಖಕ ಡಾ. ಸೋಮನಾಥ ಯಾಳವಾರ ಅವರ ಕೃತಿ-ಜನಪದರು ಕಂಡ ಶರಣರು. ಜನಪದ ಸಾಹಿತ್ಯಕ್ಕೂ ಮಾನವನ ಇತಿಹಾಸಕ್ಕೂ ಅವಿನಾಭಾವ ಸಂಬಂಧವಿದೆ. ಅದು ಮಾನವನು ನೆಲೆನಿಂತ ಸ್ಥಾನ. ನಾಗರಿಕತೆ, ಅವನ ಜೀವನ ಪದ್ಧತಿ,ಸಂಬಂಧಗಳನ್ನು ಕುರಿತು ದಾಖಲಾತಿಗೊಳಿಸುತ್ತ ಬಂದಿದೆ.ಕೃಷಿ ಪ್ರಧಾನವಾಗಿರುವ ಕನ್ನಡನಾಡಿನಲ್ಲಿ ಕೂಡಿ ದುಡಿಯುವುದು, ಕೂಡಿ ಉಣ್ಣುವುದು, ಕೂಡಿ ಬದುಕುವುದು, ನಮ್ಮ ಜನಪದರ ಬದುಕಿನ ಸೂತ್ರವಾಗಿದೆ. ಇವರು ತಮ್ಮ ಜೀವನದುದ್ದಕ್ಕೂ ಜಾತಿ,ಮತ,ಪಂಥ,ಪಂಗಡ,ಮೇಲು ಕೀಳೆನ್ನದೇ ಒಂದಾಗಲಿರುವ ಬದುಕಿನ ಸಾರವೇ ನಮ್ಮ ಸಂಸ್ಕೃತಿ.
ಶರಣರ ವ್ಯಕ್ತಿತ್ವ ಮಹಾನುಭಾವತ್ವ, ತತ್ವ-ಸಿದ್ಧಾಂತ ಹಾಗೂ ಜೀವನಪದ್ಧತಿಯನ್ನು ಕಂಡವರಿಂದ ಕೇಳಿರಬಹುದಾದ ಜನಪದ ಅಜ್ಞಾತ ಕವಿಗಳು ತಮ್ಮದೇ ಆದ ಹಾಡುಗಳ ಪ್ರಕಾರಗಳಲ್ಲಿ,ಕಥೆಗಳಲ್ಲಿ, ಲಾವಣಿಗಳಲ್ಲಿ, ಕಂಡ ಕಾವ್ಯಗಳಲ್ಲಿ, ವಿಶೇಷವಾಗಿ ತ್ರಿಪದಿಯಂಥ ಹಂತಿ ಹಾಡುಗಳಲ್ಲಿ ಹಿಡಿದಿರಿಸಿಕೊಂಡಿದ್ದಾರೆ. ಶ್ರಮಸಂಸ್ಕೃತಿಯ ಶರಣರ ಬದುಕು, ಕಾಯಕ-ದಾಸೋಹ ಪದ್ಧತಿ, ಪ್ರಾಮಾಣಿಕ ಜೀವನ, ಧಾರ್ಮಿಕ ಸಾಮಾಜಿಕ ಸಂಬಂಧಗಳು,ಅವರ ಮಾನವೀಯ ಗುಣಗಳು ದುಡಿಯುವ ವರ್ಗದ ನಮ್ಮ ಜನಪದರಿಗೆ ತುಂಬ ಹಿಡಿಸಿವೆ.
ಈ ಶರಣ ಸಂಸ್ಕೃತಿಯು ಜನಸಾಮಾನ್ಯರ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಅಂತೆಯೇ ಶರಣರನ್ನು ಕುರಿತು ಜನಪದ ಸಾಹಿತ್ಯದಲ್ಲಿ ವಿಶೇಷವಾಗಿ ತ್ರಿಪದಿ ರೂಪದ ಹಂತಿ ಹಾಡಿನಲ್ಲಿ ಹರಿಸಿದನ್ನು ಕಾಣಬಹುದು. ಅಂತಹ ತ್ರಿಪದಿಗಳಲ್ಲಿ ಗರತಿಯ ಹಾಡಿನಲ್ಲಿ, ದುಂದುಮೆ ಪದ,ಕೋಲಾಟ ಪದದಲ್ಲಿ ಹಲವು ಶರಣರ ಬದುಕು ವ್ಯಕ್ತಿತ್ವ ಹೇಗೆ ದರ್ಶಿತವಾಗಿದೆ ಎಂಬುದನ್ನು ಇಲ್ಲಿ ಅರಿಯಬಹುದು.
ಈ ಕೃತಿಯಲ್ಲಿ ಒಟ್ಟು 16 ಲೇಖನಗಳು ಇದ್ದು,ಅವು ಅಧ್ಯಯನ ನಿಷ್ಠೆಯಿಂದ ಕೂಡಿದೆ. ಶರಣರ ಬದುಕು ಮತ್ತು ಬೋಧನೆಯನ್ನು ನಮ್ಮ ಜನಪದರು ಸ್ವೀಕರಿಸಿದ ಬಗೆ,ಅದನ್ನು ಆದರ್ಶವಾಗಿಸಿಕೊಂಡು ಹಾಡಿ ಸಂತುಷ್ಟವಾದ ವಿಧಾನವು ಈ ಕೃತಿಯಲ್ಲಿ ವಿವರಿಸಲಾಗಿದೆ. ಬರವಣಿಗೆಯ ರೀತಿಯು, ಜಾನಪದ ಹಾಡುಗಳ ವಿಶ್ಲೇಷಣೆಯೂ ಪರಿಣಾಮಕಾರಿಯಾಗಿದೆ. ಸಂಶೋಧನಾತ್ಮಕ ನೆಲೆಯಲ್ಲಿ ರಚನೆಗೊಂಡ ಈ ಪುಸ್ತಕವು ಓದುಗರಿಗೆ ಸಹಾಯಕಾರಿಯಾಗಲಿದೆ.
©2024 Book Brahma Private Limited.