`ನೂರೊಂದು ಜನಪದ ಹಾಡುಗಬ್ಬಗಳು’ ಕೃತಿಯು ಹನಿಯೂರು ಚಂದ್ರೇಗೌಡ ಅವರ ಲೇಖನಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಜಾನಪದ ಬಾಲಾಜಿ ಎಸ್, 'ಅನುಭವದ ಮಾತು ಅನುಭವ ಮಾಡಿಸುತ್ತದೆ' ಎಂಬ ವಾದ ವಿಚಾರವು ನಮ್ಮ ಜನಪದರ ಸೃಜನಶೀಲ ಸಾಹಿತ್ಯಕ್ಕೆ ನೂರಕ್ಕೆ ನೂರು ಒಪ್ಪುವಂತೆ 'ನೂರೊಂದು ಜನಪದ ಹಾಡುಗಬ್ಧಗಳು' ಸಂಕಲನಕ್ಕೂ ಒಪ್ಪುತ್ತದೆ. ಒಪ್ಪ ಕೊಡುತ್ತದೆ. ಹಾಗೆಯೇ 'ನವನವೋನ್ಮೇಷಶಾಲಿನಿ ಪ್ರತಿಭಾಮತಾ' ಎಂಬ ಕಾವ್ಯಮೀಮಾಂಸಕರ ಸೂತ್ರದಂತೆ ಈ ಸಂಕಲನದ ಪ್ರತಿಯೊಂದು ಹಾಡುಗಬ್ಬಗಳು ಚಿರನೂತನವಾಗಿವೆ. ಹಾಡಿದಷ್ಟು ಹೊಸತು ಹೊಸತಾಗಿ ಹೊಳೆಯುತ್ತದೆ. 'ಯಾವ ಮಹಾಕವಿಗಳಿಗೂ, ಪ್ರತಿಭಾವಂತ ಶಿಷ್ಟಕವಿಗಳಿಗೂ ಕಡಿಮೆ ಅಲ್ಲದ ರೀತಿಯಲ್ಲಿ ನಮ್ಮ ಜನಪದರು ಆಶುಕವಿಗಳಾಗಿ ಹಾಡುಗಳನ್ನು ಕಟ್ಟಬಲ್ಲರು; ತಾವು ಕಟ್ಟಿದ್ದನ್ನು ಮನಮುಟ್ಟುವಂತೆ ಹಾಡಬಲ್ಲರು; ಹಾಡಿದ್ದನ್ನು ಪರಂಪರಾಗತ ಧನಿಭಂಡಾರಕ್ಕೆ ನೀಡಿ ಮುಂದುವರಿಯುವಂತೆ ಮಾಡಿ ತಾವು ಮಾತ್ರ ಅನಾಮಧೇಯರಾಗಿ ಉಳಿಯಬಲ್ಲರು' ಎಂಬ ಹಿರಿಮೆಗೆ ಇಲ್ಲಿಯ ಹಾಡುಗಬ್ಬಗಳು ಉತ್ತಮ ಉದಾಹರಣೆಗಳಾಗಿದೆ. ನಮ್ಮ ಜನಪದ ಹಾಡುಗಳಿಗೆ ಬೇರೆ ಎಲ್ಲ ವಿಶೇಷಣ(ಜನಪದ ಕಾವ್ಯ, ಜನಪದ ಗೀತೆ, ಹಳ್ಳಿಯ ಹಾಡು ಇತ್ಯಾದಿ)ಗಳಿಗಿಂತ ಕವಿರಾಜಮಾರ್ಗಕಾರ ಒಂದು ಉಲ್ಲೇಖಿಸಿದ 'ಪಾಡುಗಬ್ಬ' ಎಂಬ ಸಮಸ್ತಪದವನ್ನು ಶೀರ್ಷಿಕೆಯಾಗಿ ನೀಡಿರುವುದು ತುಂಬಾ ಔಚಿತ್ಯಪೂರ್ಣವಾದುದು ಎಂದು ಇಲ್ಲಿ ವಿಶ್ಲೇಷಿಸಿದ್ದಾರೆ.
©2024 Book Brahma Private Limited.