‘ಜನಪ್ರಿಯ ಜಾಣಪದ ಜಾಣ್ಮೆ’ ಜನಪದ ಗಣಿತ ಮತ್ತು ಭಾಷಾ ಚಮತ್ಕಾರಗಳ ಸಂಕಲನ. ಈ ಕೃತಿಯನ್ನು ಹಿರಿಯ ಲೇಖಕ ಜೀನಹಳ್ಳಿ ಸಿದ್ಧಲಿಂಗಪ್ಪ ಅವರು ಸಂಪಾದಿಸಿದ್ದಾರೆ. ಜನಪದ ಗಣಿತ ಮೌಖಿಕ ಸಂಪ್ರದಾಯದಲ್ಲಿ ಒಬ್ಬರಿಂದೊಬ್ಬರಿಗೆ ಅವರವರ ವಾಕ್ ಚಾತುರ್ಯ, ವ್ಯವಹಾರ ಚಾಣಾಕ್ಷತೆ, ತಂತ್ರಜ್ಞಾನ ಹಾಗೂ ಸೂಕ್ಷ್ಮತೆಯಿಂದೊಡಗೂಡಿದ ಜಾಣತನ ಮೊದಲಾದ ಅಧಿಪತ್ಯದ ಮೇಲೆ ಉಳಿದು ಬಂದಿದೆ. ಬೆಳೆದು ನಿಂತಿದೆ. ಮಾನವನ ಬದುಕು ಲೆಕ್ಕಾಚಾರದ ಹಂದರದಲ್ಲಿ ಸಾಗುತ್ತಿರುವುದರ ನಿಮಿತ್ತ ಅವನ ಉಸಿರಿನ ದ್ಯೋತಕವಾಗಿ, ಬದುಕಿನ ಅಂಗವಾಗಿ, ವ್ಯವಹಾರದ ಸಂಗವಾಗಿ, ಮನರಂಜನೆಯ ರಂಗವಾಗಿ, ವಿನೋದದ ಸ್ಫೂರ್ತಿಯ ಸೆಲೆಯಾಗಿ, ಪಂದ್ಯ ಪಣಗಳಲ್ಲಿನ ಸಂದರ್ಭದ ಸ್ಪರ್ಧಾರೂಪಕವಾಗಿ. ಮನುಷ್ಯನ ಬುದ್ಧಿ ಮಟ್ಟಕ್ಕೆ ಕೇಂದ್ರಬಿಂದುವಾಗಿ, ವಯೋಮಾನಕ್ಕೆ ತಕ್ಕಂತೆ ಅವರವರ ಅನುಭವದ ನೆಲೆಯಲ್ಲಿ ಈ ಗಣಿತ ಕಂಡುಬರುತ್ತದೆ.
ಜನಪದರು ತಮ್ಮ ದಿನನಿತ್ಯದ ಬದುಕಿನಿಂದ ಹಾಗೂ ಮಹಾಭಾರತ, ರಾಮಾಯಣ, ಭಾಗವತ, ಪುರಾಣ ಮೊದಲಾದವುಗಳ ಜ್ಞಾನಸಂಪತ್ತಿನಿಂದ ಆಯ್ದುಕೊಂಡು ಶಬ್ದ, ಅರ್ಥ, ಧ್ವನಿಗಳ ಮೂಲಕ ಭಾಷಾ ಚಮತ್ಕಾರಗಳನ್ನು ನಿರೂಪಣೆಗೈದಿದ್ದಾರೆ. ಅಂಕೆ ಸಂಖ್ಯೆಗಳೊಂದಿಗಿನ ಗಣಿತ ಒಂದು ಬಗೆಯದಾದರೆ ಭಾಷೆಯೊಳಗಿನ ಒಡನಾಟದ ಭಾಷಾ ಚಮತ್ಕಾರಗಳದು ಮತ್ತೊಂದು ಬಗೆಯದಾಗಿದೆ. ಈ ಎಲ್ಲವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಲೇಖಕರು ಈ ಕೃತಿಯಲ್ಲಿ ಸಂಕಲಿಸಿದ್ದಾರೆ.
©2024 Book Brahma Private Limited.