ವಿದ್ಯಾಸಂಸ್ಥೆಗಳು ಇಂದು ಅಂಕಪಟ್ಟಿಯ ಬೆನ್ನ ಹಿಂದೆ ಹೋಗುತ್ತಿರುವ ಕಾರಣದಿಂದ, ಅದು ವಿದ್ಯಾರ್ಥಿಗಳಲ್ಲಿರುವ ನಿಜವಾದ ಶಕ್ತಿಯನ್ನು ಹೊರ ತರುವುದಕ್ಕೆ ವಿಫಲವಾಗಿದೆ. ಶಿಕ್ಷಣ ಇಂದು ಯಾಂತ್ರಿಕವಾಗಿದೆ. ಸೃಜನಶೀಲತೆಯನ್ನು ಕಳೆದುಕೊಂಡ ಶಿಕ್ಷಣ, ಮನುಷ್ಯನೊಳಗಿನ ಕ್ರಿಯಾಶೀಲತೆಯನ್ನು ನಾಶ ಮಾಡುತ್ತದೆ. ಇದರ ಅಪಾಯವನ್ನು ಹೇಳುತ್ತಾ, ಸೃಜನಶೀಲ ಶಿಕ್ಷಣದ ವಿಸ್ತಾರಗಳನ್ನು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ನಮ್ಮ ಸಾಮಾಜಿಕ ಪರಿಸರ, ಶಾಲೆಯ ಉಸಿರು ಕಟ್ಟಿಸುವ ಪಠ್ಯವ್ಯವಸ್ಥೆ, ಜಡ್ಡು ಕಟ್ಟಿದ ನಿರ್ಧಾರಿತ ವಿದ್ಯಾಭ್ಯಾಸದ ಮುಂದುವರಿಕೆ, ಸ್ವಾತಂತ್ರವಿಲ್ಲದ ಯುವ ಪ್ರತಿಭೆಗಳು, ಮತ್ತು ಈಗಾಗಲೇ ಸ್ಥಾಪಿತ ಮೌಲ್ಯಗಳಿಗೆ ಜೋತು ಬೀಳಬೇಕಾದ ಅನಿವಾರ್ಯತೆ, ಇಂಥ ಹತ್ತು ಹಲವು ವಿಷಯಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ನಮ್ಮಲ್ಲಿ ಶಿಕ್ಷಣವೆಂಬ ನೊಗಕ್ಕೆ ಕಟ್ಟಿದ ಜೋಡೆತ್ತುಗಳೆಂಬಂತೆ, ಹೀಗೆ ಸಾಗಬೇಕೆಂಬ ಮತ್ತು ಇಂಥ ಪ್ರಶ್ನೆಗೆ ಇಂಥದೇ ಉತ್ತರವೆಂಬ, ಯೋಚಿಸಿ ಒಂದಕ್ಷರವೂ ಮಾತನಾಡಬಾರದೆಂಬ ಶಿಸ್ತಿಗೆ ಒಳಪಟ್ಟು ಅವನತಿಯತ್ತ ಸಾಗಿರುವುದು ಇಲ್ಲಿನ ಲೇಖನಗಳಿಂದ ಅರಿವಾಗುತ್ತದೆ. ಮೊದಲ ಅಧ್ಯಾಯದಲ್ಲಿ ಲೇಖಕರು ಬೇರೆ ಬೇರೆ ಚಿಂತಕರ ಅಭಿಪ್ರಾಯಗಳನ್ನು ಮುಂದಿಟ್ಟು ಸೃಜನಶೀಲತೆಯ ನಿಗೂಢತೆಯ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಹೇಗೆ ಒಬ್ಬ ವಿದ್ಯಾರ್ಥಿಯೊಳಗೆ ವಿಸ್ಮಯವೊಂದನ್ನು ಬಚ್ಚಿಟ್ಟುಕೊಂಡಿರಬಹುದು ಮತ್ತು ಅದನ್ನು ಪೋಷಿಸುವ ನಮ್ಮ ಹೊಣೆಗಾರಿಕೆಯನ್ನು ಅವರು ತಿಳಿಸಿಕೊಡುತ್ತಾರೆ. ಸೃಜನಶೀಲತೆಯ ವಿವಿಧ ಮಗ್ಗುಲನ್ನು ಚರ್ಚಿಸುವ ಇಂತಹ ಸುಮಾರು 12 ಅಧ್ಯಾಯಗಳು ಇಲ್ಲಿವೆ. ಸಂಕೀರ್ಣವಾದ ವಿಷಯಗಳನ್ನೂ ಅವರು ರೂಪಕಗಳನ್ನು ಬಳಸುತ್ತಾ, ಅರ್ಥಮಾಡಿಸುವ ಪ್ರಯತ್ನವನ್ನು ಈ ಅಧ್ಯಾಯಗಳಲ್ಲಿ ಮಾಡಿದ್ದಾರೆ. ಪೋಷಕರು, ಶಿಕ್ಷಕರು ಅಗತ್ಯವಾಗಿ ಓದಲೇ ಬೇಕಾದಂತಹ ಕೃತಿ ಇದಾಗಿದೆ.
©2024 Book Brahma Private Limited.