‘ಚಿಂತೆ ಬಿಡಿ Chill ಮಾಡಿ’ ಶ್ವೇತಾ ಭಿಡೆ ಅವರು ಬರೆದಿರುವ ವ್ಯಕ್ತಿತ್ವ ವಿಕಸನ ಕುರಿತ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮದೀಗ ಜಂಜಾಟದ ಬದುಕು. ಗೊತ್ತೋ ಗೊತ್ತಿಲ್ಲದೆಯೋ ಚಿಂತೆಗಳು ನಮ್ಮನ್ನು ಮುತ್ತುತ್ತಿರುತ್ತವೆ. ವಿಕ್ರಮಾದಿತ್ಯನ ಹೆಗಲಿಗೆ ಬದ್ದಿ ಬೇತಾಳನಂತೆ ಸೆಸ್ ನಮ್ಮ ಜೀವನಕ್ಕೂ ತಾಗಿಕೊಂಡೇ ಇರುತ್ತದೆ. `ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎನ್ನುವ ತ್ರಿಶಂಕು ಮನಸ್ಥಿತಿ ನಮ್ಮ ದೇಹದ ಮೇಲೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೂ ಅಲ್ಲದೆ, ಚಿಂತೆ ಎನ್ನುವುದು ನಮ್ಮ ಪೂರ್ಣ ಜೀವಿತಾವಧಿಯನ್ನು ನುಂಗಿ ನೀರು ಕುಡಿದು ಹಾಯಾಗಿದೆ. ಮತ್ತೆ ನಾವು? ಅದರ ಸುತ್ತಲೇ ಗಿರಕಿ ಹೊಡೆದು ನಲುಗುತ್ತಿದ್ದೇವೆ. ಹೌದು, ನಮಗೂ ಚಿಂತೆಗಳಿವೆ. ಕಾಡುತ್ತವೆ, ನೋಯಿಸುತ್ತವೆ. ಆದರೆ ಯಾವುದನ್ನು ಎದುರಿಸಿಯೂ, ಸ್ವೀಕರಿಸಿಯೂ ನೆಮ್ಮದಿಯಿಂದ ಬದುಕುವುದು ಹೇಗೆ ಎನ್ನುವ ಹುಡುಕಾಟಕ್ಕೆ ಉತ್ತರಗಳು ಇಲ್ಲಿವೆ. ಇಲ್ಯಾವುದೋ ದೊಡ್ಡ ಆದರ್ಶಗಳು, ಪ್ರವಚನಗಳು ಅಥವಾ ಗಂಭೀರವಾದ ವಿಚಾರಧಾರೆಗಳಿಲ್ಲ. ಸರಳವಾಗಿ ದಿನನಿತ್ಯ ನೀವೇ ಕೇಳಿಕೊಳ್ಳುವ ಪ್ರಶ್ನೆಗಳಿಗೆ ಬೇರೆ ಆಯಾಮದ ಉತ್ತರಗಳಿವೆ. ಯಾರಿಗೋ ಕೇಳಿ ಅರ್ಥ ಮಾಡಿಸಬೇಕಾದ ಗೊಂದಲಗಳಿಲ್ಲದೇ ನಿಮ್ಮದೇ ಪ್ರಶ್ನೆಗಳಿಗೆ ನೀವಿಲ್ಲಿ ಉತ್ತರ ಕಂಡುಕೊಳ್ಳಬಹುದು. ಯಾಕೆಂದರೆ ಲೈಫ್ ತುಂಬಾ ಸಿಂಪಲ್ ಇದೆ. ಅದನ್ನು ಕಷ್ಟ ಮಾಡಿಕೊಂಡು ಒದ್ದಾಡೋದೇ ಅಭ್ಯಾಸ ಮಾಡಿಕೊಂಡಿದ್ದೇವೆ. ಇನ್ನಾದರೂ ಅವುಗಳಿಂದ ಮುಕ್ತರಾಗೋಣ.
©2025 Book Brahma Private Limited.