ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಭಾವತೀರಯಾನ ಅಂಕಣಗಳ ಸಂಕಲಿತ ರೂಪವೇ ಭಾವತೀರಯಾನ. ನಡೆವ ದಾರಿಯಲ್ಲಿ ಸಂಪೂರ್ಣವಾಗಿ ಕತ್ತಲು ಕವಿದಿದ್ದರೂ ಮುಂದೆ ಬೆಳಕಿದ್ದೇ ಇರುತ್ತದೆ ಎನ್ನುವ ಧೈರ್ಯದ ಮಾತುಗಳನ್ನು ತುಂಬುವಂತಹ ಲೇಖನಗಳು ಇವಾಗಿವೆ.
ರಾಘವೇಂದ್ರ ಜೋಷಿಯವರು ಹೇಳುವಂತೆ ಈ ಕೃತಿಯಲ್ಲಿನ ಬರಹಗಳಲ್ಲಿ ಯಾವುದೂ ಕಟ್ಟುಕತೆಗಳಿಲ್ಲ. ಸಪ್ತ ಸಾಗರದಾಚೆ ಒಬ್ಬ ರಾಜನಿದ್ದ- ಅಂತ ಹೇಳುವದಿಲ್ಲ. ಅಲ್ಲೊಂದು ಇಲ್ಲೊಂದು ಕಲ್ಪನೆಯ 'ವಾಸ್ತವ ಚಿತ್ರಣ'ವಿರುವ ಸಣ್ಣಕತೆ ಅಥವಾ ಲಹರಿಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ಸತ್ಯಕತೆಗಳೇ. ನಮ್ಮ ಕಣ್ಣಮುಂದೆ ನಡೆದಿರುವಂಥವುಗಳೇ. ಒಟ್ಟಾರೆಯಾಗಿ ಇಡೀ ಪುಸ್ತಕ ಒಂದು ಲೌಕಿಕ ಭರವಸೆಯನ್ನು ಕಟ್ಟಿಕೊಡುವದರಲ್ಲಿ ತನ್ನೆಲ್ಲ ಶಕ್ತಿಯನ್ನು ವಿನಿಯೋಗಿಸುತ್ತಲಿದೆ.
ಎಲ್ಲೋ ಕೇಳಿದ ಸಂಗತಿಗಳನ್ನು 'ಇದಮಿತ್ಥಂ' ಎಂದು ಎಲ್ಲೂ ಹೇಳದೇ ಆಯಾ ಘಟನೆಗಳನ್ನು ಅದಕ್ಕೆ ಸಂಬಂಧಪಟ್ಟ ಮನುಷ್ಯರಿಂದಲೇ ಕೇಳಿ, ತಿಳಿದುಕೊಂಡು ಓದುಗರಿಗೆ ಕಟ್ಟಿಕೊಡುವ ರೀತಿಯಿದೆಯಲ್ಲ? ಅದು ತುಂಬ ಸಮಯ ಮತ್ತು ತಾಳ್ಮೆಯನ್ನು ಬಯಸುತ್ತದೆ. ತನ್ನ ಸೀಮಿತ ಪರೀಧಿಯ ನಡುವೆಯೂ ಇವೆಲ್ಲವುಗಳನ್ನೆಲ್ಲ ಮಣಿಕಾಂತ ತುಂಬ ಜತನದಿಂದ ಮಾಡಿದ್ದಾರೆ. ರೋಸಿಹೋದ ಮನಸ್ಸಿಗೆ, ಇಚ್ಛಾಶಕ್ತಿಯ ಕೊರತೆಯಿರುವ ಮನಸ್ಸಿಗೆ, ದುಃಖತಪ್ತ ಮನಕ್ಕೆ ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ಪ್ರಫುಲ್ಲತೆ ಕೊಡುವದಲ್ಲದೇ ಒಂದು ಮಟ್ಟಿಗಿನ ದಿಕ್ಸೂಚಿಯಾಗಬಲ್ಲವು.
ಇಡೀ ಪುಸ್ತಕದ ಭಾವವನ್ನು ಒಂದು ಸಾಲಿನಲ್ಲಿ ಕಟ್ಟಿಕೊಡುವ ನಿರರ್ಥಕ ಪ್ರಯತ್ನ ಮಾಡಬಹುದಾದರೆ, ಗಿಜಿಗಿಜಿಯಾಡುತ್ತಿರುವ ಬಸ್ಸಿನಲ್ಲಿ ಹೊಡೆದಾಡಿ ಸೀಟು ಗಿಟ್ಟಿಸಿಕೊಳ್ಳುವ ಪೋರನೊಬ್ಬ ಆಗತಾನೇ ತೇಕುತ್ತ ಬಂದ ತುಂಬು ಗರ್ಭಿಣಿಗೆ ತನ್ನ ಜಾಗ ಬಿಟ್ಟುಕೊಡುವದರಲ್ಲಿಯೇ ಮಣಿಕಾಂತರ ಬೆರಳುಗಳ ಸಾರ್ಥಕತೆಯಿದೆ.
©2025 Book Brahma Private Limited.