ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಕಷ್ಟವೇನಲ್ಲ, ಏಕೆಂದರೆ ಅದು ಮನುಷ್ಯನ ಸಹಜ ಸ್ವಭಾವ ಆದರೆ ಆ ಸ್ವಭಾವ ನಮ್ಮಲ್ಲಿ ಕೂಡ ಇದೆ ಎಂದು ಒಪ್ಪಿಕೊಳ್ಳುವವರು ಬಹಳ ಕಡಿಮೆ. ಹೊರಗಿನ ವ್ಯಕ್ತಿ, ಶಕ್ತಿಗಳ ಪ್ರಭಾವದಿಂದ ಬೆಳೆಯುವ ಅತೀಂದ್ರಿಯ ನಂಬಿಕೆಗಳಿಗೆ ಬೆಲೆ ಕೊಡದಿದ್ದರೆ, ಅತಾರ್ಕಿಕ ನಂಬಿಕೆಗಳನ್ನು ಬೆಳೆಸಿಕೊಳ್ಳದಿದ್ದರೆ ಸಾಕು. ಈಗಾಗಲೇ ಬೆಳೆದಿರುವ ಮೂಢನಂಬಿಕೆಗಳನ್ನು ಅರ್ಥ ಮಾಡಿಕೊಂಡರೆ ಅವುಗಳನ್ನೂ ಬಿಡುವುದು, ಅವುಗಳ ಸ್ಥಾನದಲ್ಲಿ ವೈಜ್ಞಾನಿಕ ಜಿಜ್ಞಾಸೆಯನ್ನು ಬೆಳೆಸಿಕೊಳ್ಳುವುದು ಸುಲಭವೆಂದು ಈ ಪುಸ್ತಕ ವಿವರಿಸುತ್ತದೆ. ಶಿಕ್ಷಣ, ಜಾಗೃತಿಯ ಮೂಲಕ ವ್ಯಕ್ತಿ ಮತ್ತು ಕುಟುಂಬಗಳಲ್ಲಿ ಆತ್ಮವಿಶ್ವಾಸವನ್ನು, ಸ್ವಾವಲಂಬನೆಯನ್ನು ಬೆಳೆಸಬಹುದಾಗಿದ್ದ ಮಾಧ್ಯಮಗಳು ಇಂದು ಉದ್ಯಮವಾಗಿ ಜನರಲ್ಲಿರುವ ಮೌಢ್ಯವನ್ನು ಪೋಷಿಸುವುದಷ್ಟೇ ಅಲ್ಲ, ಹೊಸ ಹೊಸ ಮೂಢಾಚರಣೆಗಳನ್ನು ಜನರಲ್ಲಿ ಹೇಗೆ ಬಿತ್ತುತ್ತಿದೆ ಎಂಬುದನ್ನು ಈ ಪುಸ್ತಕವು ಬಯಲು ಮಾಡುತ್ತದೆ. ಮೌಢ್ಯದ ವಿರುದ್ಧ ಸರಕಾರ ಸಾರಿದ್ದ ಸಮರ ಮತ್ತು ಅದಕ್ಕಾಗಿ ಸಿದ್ಧಪಡಿಸಿದ್ದ ಮಸೂದೆ ಯಾವ ರೀತಿ ಮೂಲೆಗುಂಪಾಯಿತು, ಅದರ ಹಿಂದಿನ ಕಾರಣವೇನು ಎಂಬುದರ ಕುರಿತಾಗಿ ಕೂಡ ಪುಸ್ತಕ ವಿವರಿಸುತ್ತದೆ. ಯಾವ ರೀತಿ ವೈಜ್ಞಾನಿಕ ಮನೋಭಾವ ಮನುಷ್ಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂಬುದನ್ನು ತಿಳಿಸುವುದು ಈ ಪುಸ್ತಕದ ಮೂಲ ಉದ್ದೇಶ.
(ಫೆಬ್ರವರಿ 2015, ಪುಸ್ತಕದ ಪರಿಚಯ)
ದೇವರ – ಧರ್ಮದ ಹೆಸರಿನಲ್ಲಿ ಅವೈಜ್ಞಾನಿಕ ಮೂಢನಂಬಿಕೆಗಳನ್ನು ಜನರಲ್ಲಿ ಬಿತ್ತಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಒಂದು ವರ್ಗ ಇಂದು ಮುಂಚೂಣಿಯಲ್ಲಿದೆ. ತನ್ಮೂಲಕ ತನ್ನ ಹಿತಾಸಕ್ತಿಯನ್ನೂ ಕಾಪಾಡಿಕೊಂಡಿದೆ. ಮೂಢನಂಬಿಕೆಗಳಿಗೇ ಇಷ್ಟೊಂದು ಪ್ರಚಾರ ಸಿಕ್ಕಿ ಜನರನ್ನು ಸೆಳೆದುಕೊಳ್ಳುವ ಶಕ್ತಿ ಇರುವುದಾದರೆ ಅದಕ್ಕೆ ಪ್ರಬಲ ಪ್ರತಿರೋಧ ನೀಡಿ ಜನರ ಮನಸ್ಸನ್ನು ವೈಜ್ಞಾನಿಕ ದೃಷ್ಟಿಕೋನದೆಡೆಗೆ ಸೆಳೆಯಲು ಅದೇಕೆ ಸಾಧ್ಯವಿಲ್ಲ ? ಖಂಡಿತ ಸಾಧ್ಯ. ವೈಜ್ಞಾನಿಕ ಮನೋವೃತ್ತಿ ಹೊಂದಲು ಜನರಿಗೆ ಮನವರಿಕೆಯಾಗುವಂತೆ ತಿಳಿಹೇಳುವುದು ಅತಿಮುಖ್ಯ ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲವೆಂಬ ಸತ್ಯವನ್ನು ಸ್ಪಷ್ಟಪಡಿಸುತ್ತ ಜನರ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಆತ್ಮವಿಶ್ವಾಸದತ್ತ ಜನರನ್ನು ಪ್ರೇರೇಪಿಸಬೇಕು. ಇದು ಒಂದು ಆಂದೋಲನದ ರೂಪದಲ್ಲಿ ನಡೆದು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೈಜೋಡಿಸಿ ಮುಂದುವರಿದರೆ ಮಾತ್ರ ಇಲ್ಲಿ ಯಶಸ್ಸು. ಇಲ್ಲವಾದರೆ ಮುಗ್ಧ ಜನರು ಮೂಢ ಆಚಾರಗಳನ್ನೇ ನೆಚ್ಚಿಕೊಂಡು ಬಳಲುತ್ತಿರಬೇಕಾದೀತು. ಇಂಥ ಜಾಗೃತಿಯನ್ನು ಮೂಡಿಸುವ ಸಲುವಾಗಿ *ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ಆಂದೋಲನ' ಎಂಬ ಚಳವಳಿ ರೂಪದ ಕೆಲಸವೊಂದು ಪ್ರಾರಂಭವಾಗಿದೆ. ಅದಕ್ಕಾಗಿ ಇಲ್ಲಿನ ನಾಲ್ಕು ಲೇಖನಗಳನ್ನೊಳಗೊಂಡ ಈ ಕೃತಿಯಲ್ಲಿ ಜನರಿಗೆ ಮೂಢನಂಬಿಕೆ ಬದಲಿಗೆ ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಕರೆ ನೀಡಿದೆ.
©2024 Book Brahma Private Limited.