ದಿಕ್ಸೂಚಿ (ಲೇಖನಗಳು)

Author : ಸಂತೋಷ್ ರಾವ್ ಪೆರ್ಮುಡ

Pages 224

₹ 200.00




Year of Publication: 2019
Published by: ದಾಕ್ಷಾಯಿಣಿ ಪ್ರಕಾಶನ
Address: ವೀಣೆ ಶಾಮಣ್ಣ ರಸ್ತೆ, ಮೈಸೂರು-570004
Phone: 9740129274

Synopsys

‘ಲೇಖಕ ಸಂತೋಷ ರಾವ್ ಪೆರ್ಮುಡ ಅವರು ವ್ಯಕ್ತಿತ್ವ ವಿಕಸನ ಕುರಿತಂತೆ ಬರೆದ  25 ಅಂಕಣ ಬರಹಗಳ ಸಂಗ್ರಹ ಕೃತಿ-ದಿಕ್ಸೂಚಿ. ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು ಎಂದು ಭಗವದ್ಗೀತೆ ಹೇಳುತ್ತದೆ. . ವೃತ್ತಿ ಕೌಶಲದೊಡನೆ ಜೀವನ ಕೌಶಲವೂ ತುಂಬಾ ಅಗತ್ಯ. ವಿವಿಧ ಕೌಶಲಗಳು ನಮ್ಮ ದೈನಂದಿನ, ವೈಯಕ್ತಿಕ, ಸಾಮಾಜಿಕ ಮತ್ತು ಔದ್ಯೋಗಿಕ ಜೀವನದ ವಿವಿಧ ಸ್ಥರಗಳಲ್ಲಿ ಬೇಕಾಗುತ್ತವೆ. ಈ ಕುರಿತು ಉನ್ನತ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಸಮಯ ನಿರ್ವಹಣೆಯ ತಂತ್ರಗಳು, ನಾಗರಿಕ ಪ್ರಜ್ಞೆ, ಉತ್ತಮ ಸಂವಹನ, ಒತ್ತಡ ನಿರ್ವಹಣೆ, ತಂಡವಾಗಿ ಕಾರ್ಯನಿರ್ವಹಿಸುವುದು, ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆ, ನಾಯಕತ್ವದ ಬೆಳವಣಿಗೆ ಮುಂತಾದ ವಿಷಯಗಳ ಕುರಿತು ವಿವರಿಸಲಾಗಿದೆ. ಇವೆಲ್ಲವೂ ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ‘ದಿಕ್ಸೂಚಿ’ಯಾಗಬಲ್ಲದು.

About the Author

ಸಂತೋಷ್ ರಾವ್ ಪೆರ್ಮುಡ
(26 March 1983)

 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...

READ MORE

Reviews

ದಿಕ್ಸೂಚಿ ಎಂದರೆ ದಾರಿತಪ್ಪಿ ಅಲೆಯುವವನಿಗೆ ತಾನು ಸೇರಬೇಕಾದ ಸ್ಪಷ್ಟ ದಿಕ್ಕನ್ನು ಸೂಚಿಸುವ ಸಾಧನ ಎಂಬುದು ಎಲ್ಲರಿಗೂ ತಿಳಿದಿದೆ. ನಾನು ಹೇಳಬಯಸಿರುವ ದಿಕ್ಸೂಚಿಯು ಬಹುತೇಕ ಅದೇ ಅರ್ಥವನ್ನೇ ಸೂಚಿಸುವ ಪುಸ್ತಕದ ಬಗ್ಗೆ. ಸಾಮಾಜಿಕವಾಗಿ ನೊಂದ, ದಾರಿತಪ್ಪಿದ, ಉಳಿದು ಮಾಡಲಿಕ್ಕೆ ಇನ್ನೇನೂ ಇಲ್ಲ ಸಾವೇ ಗತಿ ಎಂದು ತಿಳಿದ ಅನೇಕರಿಗೆ ದಾರಿದೀಪವಾಗಿ, ಅವರು ತಲುಪಬೇಕಾದ ಮುಂದಿನ ಸರಿದಾರಿಯ ಬಗ್ಗೆ ಮಾಹಿತಿಯನ್ನು ನೀಡುವ ಹೊತ್ತಿಗೆಯೇ ದಿಕ್ಸೂಚಿ. ಆತ್ಮೀಯ ಮಿತ್ರರೂ ಜ್ಞಾನವಿಕಾಸ ತರಬೇತಿ ಸಂಸ್ಥೆಯ (ಧಾರವಾಡ) ಪ್ರಾಂಶುಪಾಲರೂ ಆಗಿರುವ ಶ್ರೀ ಸಂತೋಷ್ ರಾವ್ ಪೆರ್ಮುಡರವರು ಬರೆದಿರುವ ಈ ದಿಕ್ಸೂಚಿಯು ಮುಂದಿನ ಪೀಳಿಗೆಗೆ ತಮ್ಮ ಆಸಕ್ತಿಯುತ ಕೌಶಲ್ಯಗಳ ಅಭಿವೃದ್ಧಿಗಾಗಿ ಸಾಕಷ್ಟು ಮಾರ್ಗದರ್ಶನವನ್ನು ನೀಡಬಲ್ಲಷ್ಟು ಯೋಗ್ಯತೆಯನ್ನು ಪಡೆದುಕೊಂಡಿದೆಯೆಂದರೆ ಅತಿಶಯೋಕ್ತಿಯಾಗಲಾರದು.

ಪ್ರಸ್ತುತ ಪುಸ್ತಕದಲ್ಲಿ ಶ್ರೀಯುತರು ವಿವಿಧ ಪತ್ರಿಕೆಗಳಿಗೆ ಬರೆದಿರುವ 25 ಅಂಕಣ ಬರಹಗಳಿದ್ದು ಇವುಗಳ ವಸ್ತುವಿಷಯಗಳು ಸಾಕಷ್ಟು ಆಸಕ್ತಿದಾಯಕವಷ್ಟೇ ಅಲ್ಲದೇ, ಕೌಶಲ್ಯಾಧಾರಿತ ಮನಸ್ಸುಗಳಿಗೆ ಆಹ್ಲಾದಕರ ಗ್ಲೂಕೋಸ್ ನಂತೆ ಕಾರ್ಯನಿರ್ವಹಿಸುವಂತಿವೆ. ವಿಭಿನ್ನ ವಿಷಯವಸ್ತುಗಳಿದ್ರೂ ಓದುಗನ ಸಾಮಾಜಿಕ ಹಾಗೂ ಬೌದ್ಧಿಕ ಹಿನ್ನಲೆಯು ಯಾವುದಾಗಿದ್ದರೂ ಸಹ ಸುಲಭವಾಗಿ ಅರ್ಥೈಸಿಕೊಳ್ಳುವಂತಿರುವುದು ಈ ಲೇಖನಗಳ ಹೆಗ್ಗಳಿಕೆಯಾಗಿದೆ.
ದಶಕಗಳಿಗೂ ಹೆಚ್ಚು ಕಾಲ ಮಾನವ ಸಂಪನ್ಮೂಲ ವಿಭಾಗದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುವ ಅನುಭವವಿರುವ ಸಂತೋಷ್ ರಾವ್ ರವರ ಅನುಭವದ ಮೂಸೆಯಲ್ಲಿ ಮೂಡಿಬಂದ ಲೇಖನಗಳು ಬರೀ ಕಲ್ಪಿಸಿ ಬರೆದವುಗಳಾಗಿರದೆ, ನಿತ್ಯ ಜೀವನದಲ್ಲಿ ಅನುಭವಿಸಿದ ಮತ್ತು ಅನುಭವಸ್ಥನನನ್ನು ನೇರವಾಗಿ ಕಂಡು ಅವನಿಗೆ ನೀಡಲಾದ ಕೌನ್ಸಿಲಿಂಗ್ ನ ಯೋಜನೆಗಳನ್ವಯ ಸಿದ್ಧವಾದವುಗಳಾಗಿವೆ.
ಹೇಳಬೇಕಿರುವ ವಿಚಾರವನ್ನು ನೇರವಾಗಿ ಹೇಳದೇ ಕಥಾರೂಪದಲ್ಲಿ ಕಟ್ಟಿಕೊಡುವುದು ಸಂತೋಷ್ ರವರಿಗೆ ಸಿದ್ಧಿಸಿದ ವಿಶೇಷ ಕೌಶಲ್ಯವಾಗಿದ್ದು ಅದನ್ನವರು ಸದ್ಭಳಕೆ ಮಾಡಿಕೊಂಡಿರುವುದು ಈ ಹೊತ್ತಿಗೆಯನ್ನು ಓದಿದವರಿಗೆ ಸುಲಭವಾಗಿ ಅರ್ಥವಾಗುತ್ತದೆ. 200ಕ್ಕೂ ಅಧಿಕ ಪುಟಗಳುಳ್ಳ ದಿಕ್ಸೂಚಿಯಲ್ಲಿ ಸಂತೋಷ್ ರವರು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತನ್ನು ನೀಡಿದ್ದು, ಭೌತಿಕ, ಬೌದ್ಧಿಕ, ನೈತಿಕ, ಆರ್ಥಿಕ, ಭಾವನಾತ್ಮಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ವ್ಯಕ್ತಿಯೊಬ್ಬನ ಯಶಸ್ಸಿನಲ್ಲಿ ಸಂವಹನದ ಪಾತ್ರ, ಸಹ ಕೆಲಸಗಾರರೊಂದಿಗಿನ ಅವನ ಹೊಂದಾಣಿಕೆ ಮತ್ತು ವರ್ತನೆಗಳು ಹೇಗಿರಬೇಕು, ಹವ್ಯಾಸಗಳು ನಮ್ಮ ಯಶಸ್ಸಿನಲ್ಲಿ ಹೇಗೆ ಭಾಗೀದಾರರಾಗುತ್ತವೆ, ಪಕ್ಕಾ ವೃತ್ತಿಪರರಾಗುವುದು ಹೇಗೆ, ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಲುವುದು ಹೇಗೆ ಎಂಬುದನ್ನು ಕೂಲಂಕಶವಾಗಿ ನೈಜ ಉದಾಹರಣೆಗಳ ಮುಖಾಂತರವೇ ಓದುಗರೊಂದಿಗೆ ಚರ್ಚಿಸಿದ್ದಾರೆ. ಅಷ್ಟೇ ಅಲ್ಲದೇ ಉಳಿತಾಯದ ಅವಶ್ಯಕತೆ ಬಗ್ಗೆ ತಿಳಿಸುತ್ತಾ, ಕೋಪದ ನಿಯಂತ್ರಣ ಮಾಡಿಕೊಳ್ಳುವುದು ಹೇಗೆ, ಸಮಯ ನಿರ್ವಹಣೆ, ಮಹಿಳಾ ಸಬಲೀಕರಣ, ಒತ್ತಡವನ್ನು ಮೆಟ್ಟಿನಿಂತು ಯಶಸ್ವೀ ನಾಯಕನಾಗುವುದು ಹೇಗೆ, ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆಯೂ ತಿಳಿಹೇಳಿದ್ದಾರೆ.
ವ್ಯಕ್ತಿಯೊಬ್ಬ ತನ್ನೆಲ್ಲಾ ಓರೆಕೋರೆಗಳನ್ನೂ ಸರಿಪಡಿಸಿಕೊಂಡು ತಾನೊಬ್ಬ ಸರ್ವಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಬೇಕೆಂದು ಬಯಸಿದಲ್ಲಿ ಈ ಹೊತ್ತಿಗೆಯು ಒಂದೊಳ್ಳೆ ದಿಕ್ಸೂಚಿಯನ್ನು ನೀಡಬಲ್ಲದಾಗಿದೆ. 
-ಪ.ನಾ.ಹಳ್ಳಿ.ಹರೀಶ್ ಕುಮಾರ್
 

Related Books