ಯಶಸ್ಸು ಪರಿಶ್ರಮದ ಬಾಬತ್ತನ್ನು ಕೇಳುತ್ತದೆ. ಸಿದ್ಧತೆಯ ಒಂದೊಂದೆ ಮೆಟ್ಟಿಲನ್ನು ಸಾಗುತ್ತಾ ಹೋದಂತೆ ಕೊನೆಗೆ ಯಶಸ್ಸು ಅಪ್ಪಿಕೊಳ್ಳುತ್ತದೆ. ವಿಜಯ ಒಪ್ಪಿಕೊಳ್ಳುತ್ತದೆ. ಯಶಸ್ಸನ್ನು ಒಲಿಸಿಕೊಳ್ಳಲು ಬೇಕಾದ ಸೂತ್ರಗಳ ಹಾಗೆ ಗೋಪಕುಮಾರ್ ಅವರು ವಿಜಯೀಭವ ಪುಸ್ತಕವನ್ನು ಹೆಣೆದಿದ್ದಾರೆ. 17 ಅಧ್ಯಾಯಗಳು ಈ ಕೃತಿಯಲ್ಲಿವೆ. ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ. ಟಿಪ್ಪಣಿಗಳ ರೂಪದಲ್ಲಿ ಬರಹ ಇರುವುದರಿಂದ ಮಕ್ಕಳಿಗೆ ಓದಲು ಹೊರೆಯಾಗದು. ಪ್ರತಿ ಅಧ್ಯಾಯದ ಕೊನೆಗೆ ಸ್ಪೂರ್ತಿ ನೀಡುವ ಚಿಕ್ಕ ಚಿಕ್ಕ ಘಟನೆಗಳನ್ನು ನೀಡಿದ್ದು ಅವು ಸಾಧನೆಗೆ ಪ್ರೇರಣಾದಾಯಕವಾಗಿವೆ. ಮಗುವಿನ ಕಲಿಕಾ ಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಪುಸ್ತಕದಲ್ಲಿ ಹೇಳಲಾಗಿದೆ. ಈ ಪುಸ್ತಕವು ಮಕ್ಕಳಿಗಾಗಿ ಬರೆದ ಪುಸ್ತಕ ಎನಿಸಿದರೂ ಪಾಲಕರು, ಶಿಕ್ಷಕರು ಅವಶ್ಯವಾಗಿ ಓದಲೇಬೇಕಾದ ಪುಸ್ತಕ. ತರಗತಿಯಲ್ಲಿ ಬೋಧಿಸುತ್ತಲೇ ವಿದ್ಯಾರ್ಥಿಗಳ ಜೊತೆ ಬೆರೆತು ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಇದರ ಫಲಶ್ರುತಿಯಾಗಿ ಈ ಪುಸ್ತಕ ಮೂಡಿಬಂದಿದೆ. ಈ ಕೃತಿಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಲಹೆಗಳ ಮಹಾಪೂರವೇ ಇದೆ. ಹಾಗೂ ಈ ಸಲಹೆಗಳು ನೈಜತೆಯಿಂದ ಕೂಡಿದ್ದು ಅಳವಡಿಸಿಕೊಳ್ಳಲು ಸುಲಭವಾಗಿವೆ. ಶಿಸ್ತು, ಸಮಯಪಾಲನೆ, ಒತ್ತಡ ನಿರ್ವಹಣೆಯಂತಹ ಸಹಜವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಹತ್ತು ಹಲವು ವಿಷಯಗಳನ್ನು ಈ ಕೃತಿ ಒಳಗೊಂಡಿದೆ. ಮೌಲ್ಯಗಳನ್ನು ಮತ್ತು ಕೌಶಲ್ಯಗಳನ್ನು ಹೊಂದುವಲ್ಲಿ ಸಹಕಾರಿಯಾಗಿದೆ. ಪೋಷಕರು ಮತ್ತು ಶಿಕ್ಷಕರಿಗೂ ಈ ಕೃತಿ ಉಪಯುಕ್ತಕರ.
©2025 Book Brahma Private Limited.