ಜಗತ್ತಲ್ಲಿ ಎಲ್ಲರಿಗೂ ಸುಳ್ಳೇ ಬೇಕು. ಅರಗಿಸಲು ಕಷ್ಟವಾಗೋ ಕಟು ಸತ್ಯಗಳು ದೂರಾನೇ ಇರಬೇಕು. ಅಪ್ಪಿತಪ್ಪಿ ಕಿವಿ ಹತ್ತಿರ ಬಂದ್ರೂ ಕೇಳಿಸದಂತೆ ಮುಂದೆ ಸಾಗಬೇಕು. ನಾವಿರೋದೇ ಹೀಗೆ. ನಮಗೆ ಈಗ ತಕ್ಷಣಕ್ಕೆ ಆರಾಮಾಗಿದ್ರೆ ಸಾಕು. ಸುಳ್ಳೇ ದೇವರು. ಅಡ್ಜ್ ಸ್ಟ್ ಮೆಂಟೇ ಬದುಕು. ಸ್ವಲ್ಪ ಆಚೀಚೆ ಮಾಡ್ಕೊಂಡ್ರೆ ಲೈಫು ಬಿಂದಾಸು. ಸಮಸ್ಯೆಯ ಕಣ್ಣು ತಪ್ಪಿಸಿ ಆಚೆ ನೂಕಿ ಬಿಟ್ರೆ ನೂರ‍್ಕಾಲ ಸುಖವಾಗಿ ಬಾಳಬಹುದು ಅನ್ನೋ ಹಳೇ ಕಾಲದ ಹಳೇ ನಂಬಿಕೆಗಳನ್ನು ಗಂಟು ಕಟ್ಟಿ ಮೂಲೆಗೆಸೆಯಬೇಕೆಂದೇ ಈ ಬರಹಗಳು. ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ. ಕಟಕಟೆಯಲ್ಲಿ ನಿಂತಂತೆ ಹಾರ್ಶ್ ಟ್ರುತ್‌ಗಳನ್ನು ಒಂದೊಂದಾಗೇ ನಿಮ್ಮ ಕಿವಿಗೆ ಊದುತ್ತೇನೆ. ಕಣ್ಣಿಗೆ ತಲುಪಿಸುತ್ತೇನೆ. ಒಪ್ಪಿಕೊಳ್ಳಲು ಕಷ್ಟವಾದ್ರೆ ಆಗ್ಲಿ ಬಿಡಿ. ಅಪ್ಪಿಕೊಳ್ಳದೆ ಹಿಂದೆ ಸರಿಯಿರಿ. ಹಾಗೇನೂ ಇಲ್ಲ ನಂಗೆ, ಸತ್ಯವೇ ಜೀವನದ ಪರಮ ಸತ್ಯ ಅಂತ ನೀವನ್ನೋದಾದರೆ ಕಣ್ಣಿಗೊತ್ತಿಕೊಳ್ಳಿ. ಆಮೇಲೆ ನಿಮ್ಮನ್ನು ನೀವು ಪ್ರೀತಿಸತೊಡಗುತ್ತೀರಿ. ಅಷ್ಟೇ ಸಾಕು. ಬೋಧಿವೃಕ್ಷದ ಕೆಳಗೆ ಕೂತು ಧ್ಯಾನಿಸಿದರೆ ಬುದ್ಧನಾಗುವುದು ಸಾಧ್ಯವಿಲ್ಲ. ನಿಮಗೆ ನೀವು ಅರ್ಥವಾಗುವುದೇ ಜ್ಞಾನೋದಯ. ನಿಮ್ಮನ್ನು ನೀವು ಅರಿತುಕೊಳ್ಳುವುದೇ ಜೀವನದ ಬಹುದೊಡ್ಡ ಗೆಲವು. ಆಗೋದೆಲ್ಲಾ ಆಗಲಿ ಅನ್ನೋದು ಮನಸ್ಸಲ್ಲೇ ಇರ‍್ಲಿ. ಆಗುವುದೆಲ್ಲಾ ಒಳ್ಳೇದಕ್ಕೆ ಅನ್ನೋ ತತ್ತ್ವವೂ ಎಲ್ಲೋ ಒಂದು ಕಡೆ ಸೈಲೆಂಟಾಗರ‍್ಲಿ. ಅದು ಗೊತ್ತಿದ್ದೇ ನೀವು ಮಾಡಬೇಕಾದ ಒಳ್ಳೆ ಕೆಲ್ಸಗಳು ಸಾಕಷ್ಟಿವೆ.
©2024 Book Brahma Private Limited.