ಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು. ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎನ್ನುವ ಅರಿವನ್ನು ಈ ಕೃತಿ ನಮಗೆ ನೀಡುತ್ತದೆ. ನೇಮಿಚಂದ್ರ ಅವರ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗವಾಗಿದೆ ಈ ಕೃತಿ. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನ ಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮೊಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ. ನಮ್ಮ ಆರೋಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ ಎನ್ನುವುದನ್ನುಹಲವು ಉದಾಹರಣೆಯೊಂದಿಗೆ ಈ ಕೃತಿ ವಿವರಿಸುತ್ತದೆ. ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.