ಶಾಸನೋಕ್ತ ಲಿಂಗಯತ ಹಂಡೆ ಅರಸುಮನೆತನ ಕೃತಿಯು ಎಸ್.ಸಿ.ಪಾಟೀಲ ಅವರ ಕೃತಿಯಾಗಿದೆ. ಇತಿಹಾಸವೆನ್ನುವುದು ಕೇವಲ ಗತಕಾಲಕ್ಕೆ ಸೀಮಿತವಾದ ವಿದ್ಯಮಾನವಲ್ಲ. ಪರೋಕ್ಷವಾಗಿ ಅದು ವರ್ತಮಾನದ ಬದುಕಿಗೆ ಬೆಲೆಯುಳ್ಳ ಪಾಠವಾಗಿಯೂ ಪರಿಣಮಿಸುತ್ತದೆ. ಹೀಗಾಗಿ ಪ್ರತಿಯೊಂದು ಸಮಾಜ ತನ್ನ ಬದುಕಿನ ಬೇರುಗಳನ್ನು ಗತಕಾಲದಲ್ಲಿ ಶೋಧಿಸುತ್ತಲೇ ಇರುತ್ತದೆ. ಇತಿಹಾಸವನ್ನು ಹುಡುಕಿಕೊಳ್ಳದ ಸಮಾಜವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಈ ಕ್ರಿಯೆ ಜಗತ್ತಿನಾದ್ಯಂತ ಜರುಗುತ್ತ ಬಂದಿದೆ. ಲಿಂಗಾಯತ ಹಂಡೆ ಸಮಾಜದವರ ಪ್ರಯತ್ನದಿಂದ ಪ್ರಕಟವಾಗುತ್ತಲಿರುವ ಈ “ಶಾಸನೋಕ್ತ ಹಂಡೆ ಅರಸು ಮನೆತನ” ಪುಸ್ತಕಕ್ಕೆ ಮುನ್ನುಡಿ ಬರೆಯುವಾಗ, ನಾನು ಬೇರೆಡೆ ನಮೂದಿಸಿರುವ ಮೇಲಿನ ಮಾತುಗಳು ನೆನಪಿಗೆ ಬರುತ್ತಿವೆ. ಲಿಂಗಾಯತವೆನ್ನುವುದು ೧೨ನೆಯ ಶತಮಾನದಲ್ಲಿ ಹಲವು ವೃತ್ತಿ, ಜಾತಿ, ಧರ್ಮಗಳಿಂದ ಬಂದು ಸೇರಿದವರ ಜನಸಮುದಾಯವಾಗಿದೆ. ಅಂದು ಬಸವಣ್ಣನವರ ನೇತೃತ್ವದಲ್ಲಿ ಏಕರೂಪಿಯಾಗಿದ್ದ ಈ ಸಮುದಾಯ ತರುವಾಯದ ದಿನಗಳಲ್ಲಿ ಪರಿಸರದ ಪ್ರಭಾವ, ಒತ್ತಡಗಳಿಗೆ ಒಳಗಾಗಿ ಮತ್ತೆ ಮತ್ತೆ ಬಿಚ್ಚಿಕೊಳ್ಳುತ್ತ ಬಂದಿತು. ಹೀಗಾಗಿ ಇಂದು ಅದರಲ್ಲಿ ಸ್ಪಷ್ಟ-ಅಸ್ಪಷ್ಟ ಪಂಗಡಗಳು ರೂಪತಾಳಿವೆ. ಇವು ಮತ್ತೆ ಹಿಂದಿನಂತೆ ಏಕರೂಪಕ್ಕೆ ಬರುವುದು ಇಂದಿನ ಅಗತ್ಯವಾಗಿದೆ. ಈ ದಿಸೆಯಲ್ಲಿ ಸಮಾಜದ ಧುರೀಣರು, ಮಠಾಧೀಶರು ಪ್ರಯತ್ನ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಹಂಡೆ ಲಿಂಗಾಯತ ಪಂಗಡದವರು ಈ ಕಾರ್ಯಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದರ ಅಂಗವಾಗಿ 'ಶಾಸನೋಕ್ತ ಹಂಡೆ ಅರಸು ಮನೆತನ' ಕೃತಿ ಈಗ ಪ್ರಕಟವಾಗುತ್ತಲಿದೆ. ಎಂದು ಡಾ. ಎಂ.ಎಂ ಕಲಬುರ್ಗಿ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.