ಮಕ್ಕಳು ಆಡುತ್ತಾ ಆಡುತ್ತಾ ಬೆಳೆಯುತ್ತಾರೆ ಎಂಬ ಮಾತಿದೆ. ಅದರಂತೆ ಅವರು ಆಡುತ್ತಾ ತಮ್ಮ ಪೋಷಕರನ್ನು ಅನುಕರಿಸುತ್ತಾ ಬೆಳೆಯುತ್ತಾರೆ. ಆದರೆ ಇದರ ನಡುವೆ ಅವರು ಕಲಿತುಕೊಳ್ಳುವ ವಿಷಯಗಳು ಮುಖ್ಯವಾಗಿ ಪೋಷಕರಿಂದ ಕಲಿತಂತಹ ವಿಷಯಗಳಾಗಿರುತ್ತವೆ. ಇಲ್ಲಿ ಪೋಷಕರ ಜವಾಬ್ದಾರಿ ಬಹಳ ಪ್ರಮುಖ. ಈ ಜವಾಬ್ದಾರಿಯ ಕುರಿತು ವಿವರ ನೀಡುವಂತಹ ಪುಸ್ತಕ ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ. ವೈಜ್ಞಾನಿಕ ಪ್ರವೃತ್ತಿಯೆಂಬುದು ಅಷ್ಟು ಸುಲಭವಾಗಿ ದಕ್ಕುವಂತಹುದಲ್ಲ. ಅದನ್ನು ಸಣ್ಣದಿರುವಾಗಿಂದ ಬೆಳೆಸಿಕೊಂಡು ಬರವಂತಹ ಜರೂರತ್ತು ಇದೆ. ಮೂಢನಂಬಿಕೆಗಳನ್ನು ಮಕ್ಕಳ ತಲೆಯೊಳಗೆ ತುರುಕದೆ ಅವರಲ್ಲಿ ತಾರ್ಕಿಕವಾಗಿ ವಿಚಾರ ಮಾಡುವಂತಹ ಆಲೋಚನಾ ಶಕ್ತಿಯನ್ನು ಬೆಳೆಸುವುದು ಪೋಷಕರ ಕರ್ತವ್ಯ. ವೈಜ್ಞಾನಿಕ ಮನೋವೃತ್ತಿ ಇಲ್ಲವಾದಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಷ್ಟಸಾಧ್ಯವೆನ್ನುವುದು ಲೇಖಕರ ವಾದ. ಅದು ನಿಜವೂ ಸರಿ. ತರ್ಕಕ್ಕೆ ಸಿಗದಂತಹ ವಿಚಾರಗಳನ್ನು ಕಣ್ಣು ಮುಚ್ಚಿ ನಂಬುವಂತಹ ಪ್ರವೃತ್ತಿಯನ್ನು ಬೆಳೆಸದೇ, ಎಲ್ಲವನ್ನೂ ವೈಜ್ಞಾನಿಕ ಧೃಷ್ಟಿಯಲ್ಲಿ ನೋಡುವಂತಹ ಗುಣವನ್ನು ಬೆಳೆಸಿಕೊಳ್ಳಬೇಕೆನ್ನುವುದು ಈ ಪುಸ್ತಕದ ಆಶಯ.
©2024 Book Brahma Private Limited.