ಬದುಕು ಪುಕ್ಸಟ್ಟೆ ಅಲ್ಲ-ಲೇಖಕ ರಾಘವೇಂದ್ರ ಈ ಹೊರಬೈಲು ಅವರು ವ್ಯಕ್ತಿತ್ವ ವಿಕಸನ ಕುರಿತಂತೆ ಬರೆದ ಲೇಖನಗಳ ಸಂಗ್ರಹ ಕೃತಿ. ಬದುಕು ಯಾವಾಗಲೂ ಪುಕ್ಸಟ್ಟೆ ಸಿಗುವುದಿಲ್ಲ. ಅದಕ್ಕೊಂದು ಬೆಲೆ ಇದೆ. ಹಾಗಂತ ಬೆಲೆ ಕಟ್ಟಲಾಗುವುದಿಲ್ಲ. ಮನುಷ್ಯನಾದವನಲ್ಲಿ ದೌರ್ಬಲ್ಯಗಳಿರುವುದು, ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪಾಗುವುದೂ ಸಹಜ. ಆ ದೌರ್ಬಲ್ಯ, ತಪ್ಪುಗಳ ಘಟನೆಗಳನ್ನೇ ಇಟ್ಟುಕೊಂಡು, ಅವುಗಳನ್ನು ತಿದ್ದಿಕೊಳ್ಳುವ ಮಾರ್ಗವನ್ನೂ ಕುತೂಹಲಭರಿತ ಕಥಾ ರೂಪದಲ್ಲಿ ಹೆಣೆದಿದ್ದು ಕೃತಿಯ ವೈಶಿಷ್ಟ್ಯ.
ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಸದಾಶಿವ ಸೊರಟೂರು ‘ಜಗತ್ತಿನ ಕಡೆ ಮುಖ ಮಾಡಿ ಕೂತು ಅದರೊಂದಿಗೆ ತನ್ನ ಬದುಕಿನೊಳಗಿನ ಅನುಭವದ ಸರಕುಗಳನ್ನು ತಾಳೆ ಹಾಕಿಕೊಳ್ಳುವ ಹೊತ್ತಿಗೆ ಕಳೆದ ಒಂದೊಂದು ಕ್ಷಣಗಳು ಕೂಡಾ ನನಗೊಂದು ಪಾಠವಾಗಿ ಬಿಟ್ಟಿತಲ್ಲ ಅನಿಸಿಬಿಡುತ್ತದೆ. ಬದುಕಿನ ಅಂಥಹ ಹತ್ತಾರು ಹಸಿಹಸಿ ಅನುಭವಗಳೊಂದಿಗೆ ರಾಘವೇಂದ್ರ ಈ ಹೊರಬೈಲು ಅವರು ಈ ಪುಸ್ತಕದಲ್ಲಿ ನಿಮ್ಮೊಂದಿಗೆ ಮುಖಾಮುಖಿಯಾಗಿದ್ದಾರೆ. ಅನುಭವಗಳು ಕೊಟ್ಟು ಹೋದ ಬದುಕಿನ ಪಾಠವನ್ನು ಪಕ್ಕದಲ್ಲಿ ಕೂತು ಆತ್ಮೀಯವಾಗಿ ಹೇಳುವಂತೆ ನಿರೂಪಿಸಿದ್ದಾರೆ. ಅರೆ, ಇದು ನನ್ನದು ಕೂಡಾ ಅನ್ನಿಸುವಂತೆ ಬರೆದಿದ್ದಾರಲ್ಲ ಅದು ಅವರ ಶಕ್ತಿ. ಓದುತ್ತಾ ಹೋದಂತೆ ಅನುಭವಗಳು ಪಾಠದಂತೆ ಆವರಿಸಿಕೊಳ್ಳುವ ಪರಿ ಅದ್ಭುತವಾಗಿದೆ. ಆ ಕಲೆ ಅವರಿಗೆ ಸೊಗಸಾಗಿ ಸಿದ್ಧಿಸಿದೆ’ ಎಂದು .ಪ್ರಶಂಸಿಸಿದ್ದಾರೆ.
©2024 Book Brahma Private Limited.