‘ಅಬ್ಬಕ್ಕ ಸಂಕಥನ’ ಎನ್ನುವ ವಿಶಿಷ್ಟ ವಿಚಾರಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳ ಭಾಷಣಗಳನ್ನು, ಇವುಗಳ ಜೊತೆಗೆ ಆರಂಭದಿಂದ ಇಂದಿನವರೆಗೆ ಅಬ್ಬಕ್ಕ ಉತ್ಸವ ನಡೆದು ಬಂದ ಹೆಜ್ಜೆ ಗುರುತುಗಳನ್ನು ಸಚಿತ್ರವಾಗಿ ವರದಿಗಳ ಮೂಲಕ ಕಟ್ಟಿಕೊಟ್ಟಿರುವ ವಿಭಿನ್ನ ಕೃತಿ ಇದು. ಈ ಕೃತಿಯಲ್ಲಿ ರಾಣಿ ಅಬ್ಬಕ್ಕನಿಗೆ ಸಂಬಂಧಿಸಿದ ಅಪೂರ್ವ ದಾಖಲೆಗಳನ್ನು ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿ ಅನುಬಂಧ ರೂಪದಲ್ಲಿ ಕೊಡಲಾಗಿದೆ. ಅಬ್ಬಕ್ಕಳ ಕಾರ್ಯತಂತ್ರ ರೂಪಿಸಿಕೊಳ್ಳುವ ಒಕ್ಕೂಟ ವ್ಯವಸ್ಥೆ, ಜಾತಿ ಧರ್ಮಗಳನ್ನು ಮೀರಿ ಜನರನ್ನು ಸಂಘಟಿಸುವ ಜಾತ್ಯಾತೀತ ವ್ಯವಸ್ಥೆ- ಇವು ಎಲ್ಲವೂ ವ್ಯಾವಹಾರಿಕ ಉದ್ದೇಶ ಹೊಂದಿದ್ದಾಗಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳ್ಳೆಯ ಗುಣಗಳನ್ನು ಉಳ್ಳದಾಗಿತ್ತು. ಹಾಗಾಗಿ, ಪೋರ್ಚುಗೀಸರ ವಿರುದ್ಧ ಹೋರಾಡಿದ ದೇಶಪ್ರೇಮ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಾಡಿನ ಆರ್ಥಿಕ ವ್ಯವಸ್ಥೆಯನ್ನು ಬೇರೆಯವರಿಗೆ ಮಾರಾಟ ಮಾಡದ ಸ್ವಾಭಿಮಾನ ಎನ್ನುವ ವಿವರಣೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎನ್ನುತ್ತಾರೆ ಲೇಖಕ ಬಿ.ಎ. ವಿವೇಕ ರೈ. ಈ ಕೃತಿ ರಾಣಿ ಅಬ್ಬಕ್ಕ ಅವರ ಸ್ವಾಭಿಮಾನದ ಬದುಕಿನ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ.
©2024 Book Brahma Private Limited.