ಲೇಖಕ ಡಾ. ಪದ್ಮಾಕರ ಅಶೋಕಕುಮಾರ ಮಟ್ಟಿ ಅವರು ವಚನಕಾರ ಉರಿಲಿಂಗ ಪೆದ್ದಿ ಅವರು ಜೀವನ ಹಾಗೂ ವಚನಗಳ ರಚನೆಯ ಸಾಧನೆ ಕುರಿತು ಸಂಶೋಧನೆ ನಡೆಸಿ ಬರೆದ ಕೃತಿ ಇದು. ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಅನುಪಮ. ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯ ಎಂಬ ಹೊಸ ಸೃಷ್ಟಿಯನ್ನುಶರಣರು ಹರಿಸಿದರು. ಪ್ರಾಚೀನ ಪರಂಪರೆಯಲ್ಲಿ ನಡೆದು ಬರುತ್ತಿದ್ದ ಕಾವ್ಯರಚನಾ ಪದ್ಧತಿಯನ್ನು ಕಿತ್ತೊಗೆದು ಅಚ್ಚಗನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದರು. ಅಣ್ಣ ಬಸವಣ್ಣನವರಿಂದ ಪ್ರಭಾವಿತರಾದ ಅನೇಕ ಶರಣ-ಶರಣೆಯರ ಪೈಕಿ ಉರಿಲಿಂಗ ಪೆದ್ದಿ ಸಹ ಒಬ್ಬರು. ಸಮಾಜದ ಕೆಳಸ್ತರದಿಂದ ಬಂದ ಉರಿಲಿಂಗ ಪೆದ್ದಿಗಳು ತಾವು ಅಂಗೀಕರಿಸಿದ ಶರಣ ಧರ್ಮವನ್ನು ಕುರಿತು ಅತ್ಯಾಭಿಮಾನಿಯಾಗಿದ್ದರು. ತಮ್ಮ ಸುತ್ತಮುತ್ತ ಸಮಾಜದಲ್ಲಿ ಕಣ್ಣಿಗೆ ಕಟ್ಟುವಂತೆ ಮೂಢನಂಬಿಕೆ, ಢಾಂಬಿಕ ಭಕ್ತಿ,ಬಣ್ಣದ ಮಾತು, ಅನಾಚಾರ ಮುಂತಾದ ಅನಿಷ್ಟ ಪದ್ಧತಿಗಳನ್ನು ಶರಣ ಉರಿಲಿಂಗ ಪೆದ್ದಿಯವರು ಖಂಡಿಸಿದ್ದಾರೆ. ಮಾತಿನ ವೇದ ನೀತಿ ಶಾಸ್ತ್ರಗಳು, ಜಾತಕದ ಕಥೆಗಳು, ವಂಚನೆ ಶೋಷಣೆಯ ತಂತ್ರಗಳು, ಅರಿವಿಗೆ ತಕ್ಕಆಚಾರವಿಲ್ಲದ ದೊಡ್ಡತನದ ಮುಖವಾಡ ಹಾಕಿ ಮೆರೆದಾಡುವ ಜನರನ್ನು ಉರಿಲಿಂಗಪೆದ್ದಿಗಳು ಸಹಿಸಲಿಲ್ಲ. ಶರಣರ ದೃಷ್ಟಿಯಲ್ಲಿ ವಚನರಚನೆಯ ಆತ್ಮಸಾಧನೆಯ ಒಂದು ಮಾಧ್ಯಮ.ಅನುಭಾವದ ನಿಲುವಿನ ಮೂರ್ತರೂಪ ಬಸವಣ್ಣ, ಅಲ್ಲಮಪ್ರಭು,ಅಕ್ಕಮಹಾದೇವಿ, ಮುಂತಾದವರ ನಿಲುವೂ ವಚನಗಳು ಸ್ವರೂಪಕ್ಕೆ ಆಧಾರವಾಗಿವೆ. ಉರಿಲಿಂಗಪೆದ್ದಿಗಳ ವಚನಗಳು ಅವರ ಪ್ರಜ್ಞಾ ಪ್ರವೃತ್ತಿಯಿಂದಾಗಿ ಒಮ್ಮೊಮ್ಮೆ ಕಟುವಾಗಿ ತೋರುತ್ತವೆ. ಭಾಷೆ ಉಗ್ರವಾಗಿ ಕಂಡರೂ ನೇರ ಮತ್ತು ಸರಳವಾಗಿವೆ. ಅವರ ವಚನಗಳಲ್ಲಿ ಕಂಡುಬರುವ ಉಪಮೆ ಅನುಪಮ ಬೆಡಗು ಸಾಣೆ ಹಿಡಿದ ವಜ್ರದ ಕೊರೆತಗಳ ಹಿರಿಮೆ ವಚನ ಸಾಹಿತ್ಯದ ವಿಶಿಷ್ಟ ಲಕ್ಷಣಗಳಿಗೆ ಮಾದರಿಯಾಗಿವೆ. ಉರಿಲಿಂಗಪೆದ್ದಿ ಶರಣರ ಮಾನವೀಯ ಧೋರಣಗಳಿಂದ ಪ್ರಭಾವಿತರಾಗಿ ಭಕ್ತಿಪಥವನ್ನು ಮೈಗೂಡಿಸಿಕೊಂಡು ಅಂಗಕ್ಕೆ ಲಿಂಗವನ್ನುಅಳವಡಿಸಿಕೊಂಡು ಲಿಂಗಾಂಗ ಸಂಗಿಯಾಗಿ ಪ್ರಸಾದ ಕಾಯಕರಾದರು. ಅಂತರಂಗಶುದ್ಧಿ ಕಾಯಕನಿಷ್ಠೆ ಜೀವನ ಶ್ರದ್ಧೆಗಳ ಮೂಲಕ ವಾಸ್ತವದ ಆಚೆಗೆ ಚಾಚಿಕೊಂಡಿದ್ದರೂ ಅಸ್ತಿತ್ವದಲ್ಲಿ ಬೇರು ಬಿಟ್ಟ ದಿವ್ಯ ಸ್ಥಿತಿಯೊಂದರ ದರ್ಶನ ಮಾಡಿಸುವ ಮಹಾನುಭಾವrರು. ತಮ್ಮ ಆದರ್ಶ ಬದುಕಿನ ಜೀವನಾನುಭವ ಅಮೃತವನ್ನು ಜನತೆಯ ಮುಂದಿಟ್ಟು ಜೀವನ ಮೌಲ್ಯವನ್ನು ಅಭಿವೃದ್ಧಿಪಡಿಸಿದವರು. ಉರಿಲಿಂಗಪೆದ್ದಿಗಳ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ, ಉರಿಲಿಂಗಪೆದ್ದಿಗಳ ವಚನ ಸಾಹಿತಿಕ ವಿವೇಚನೆ,ವಚನಸಾಹಿತ್ಯದಲ್ಲಿ ಉರಿಲಿಂಗಪೆದ್ದಿಗಳ ಸ್ಥಾನ, ಹೀಗೆ ಆರು (6) ಅಧ್ಯಾಯಗಳನ್ನು ಮಾಡಿಕೊಂಡು ಸಂಶೋಧನೆ ಗೈದಿದ್ದು, ಸಂಶೋಧನೆಯಲ್ಲಿ ತೊಡಗಿರುವವರಿಗೆ ಇದೊಂದು ಆಕರ ಗ್ರಂಥವಾಗುವುದರಲ್ಲಿ ಸಂದೇಹವಿಲ್ಲ
©2024 Book Brahma Private Limited.