ಲೇಖಕ ಡಾ. ಪದ್ಮಾಕರ ಅಶೋಕಕುಮಾರ ಮಟ್ಟಿ ಅವರು ಬೀದರ ಜಿಲ್ಲೆಯ ಮೀನಕೇರಿ ಗ್ರಾಮದವರು. ತಂದೆ ಶಿವರಾಜ ಮಟ್ಟಿ, ತಾಯಿ ಗಂಗಮ್ಮ ಮಟ್ಟಿ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ, ಹುಮನಾಬಾದಿನಲ್ಲಿ ಬಿಎ ಪದವಿ ಹಾಗೂ ಗುಲಬರ್ಗಾ ವಿ.ವಿ.ಯಿಂದ ಎಂ.ಎ ಪಡೆದರು.
ಯಶವಂತ ಚಿತ್ತಾಲರ ಕಥೆಯಾದಳು ಹುಡುಗಿ ಕಥಾಸಂಕಲನದ ಮೇಲೆ ಎಂ.ಫಿಲ್ ಹಾಗೂ ವಚನಕಾರ ಉರಿಲಿಂಗ ಪೆದ್ದಿ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ. ಸಿರಿಗನ್ನಡ ವೇದಿಕೆಯ ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.
ಕೃತಿಗಳು: ತ್ಯಾಗಜೀವಿ, ಕರುಳಬಳ್ಳಿ (ಕವನ ಸಂಕಲನಗಳು) ಜನಪದ ಸಾಹಿತ್ಯ, (ಗುಲಬರ್ಗಾ ವಿ.ವಿ. ಪದವಿ ತರಗತಿಗೆ ಪಠ್ಯವಾಗಿದೆ). ಇವರು ಬರೆದ ಲೇಖನಗಳು, ಕಥೆ ಕವನಗಳು ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.
ಪ್ರಶಸ್ತಿ-ಪುರಸ್ಕಾರಗಳು: ಚಿತ್ರದುರ್ಗದ ಮುರುಘಾಮಠದಿಂದ ಶಿಕ್ಷಕ ಪ್ರಶಸ್ತಿ ಹಾಗೂ ಶಿಕ್ಷಕರ ರತ್ನ ಪ್ರಶಸ್ತಿಗಳು ಲಭಿಸಿವೆ.